ಬೆಳಗಾವಿ: ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯ ಪರವಾನಿಗೆಯನ್ನು ರಾಜ್ಯ ಕೃಷಿ ಮಾರಾಟ ಇಲಾಖೆ ರದ್ದುಗೊಳಿಸಿ ಆದೇಶ ಮಾಡಿದರೂ ಖಾಸಗಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಿರುವುದನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯವಹಾರ ಅಧಿನಿಯಮ 1966ರ ಕಲಂ 72 ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ತತಕ್ಷಣದಿಂದ ರದ್ದಾಗಬೇಕೆಂದು ಜಾರಿಗೆ ಬರುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಎಪಿಎಂಸಿ ಕಿರಿಯ ಅಧಿಕಾರಿಗಳು ರಾತ್ರೋರಾತ್ರಿ ಜೈ ಕಿಸಾನ್ ಖಾಸಗಿ ಮಾರುಕಟ್ಟೆಗೆ ಬಂದಿದ್ದ ತರಕಾರಿ ವಾಹನಗಳನ್ನು ಎಪಿಎಂಸಿಗೆ ಸ್ಥಳಾಂತರ ಮಾಡಲು ನೋಡಿದಾಗ ಖಾಸಗಿ ಮಾರುಕಟ್ಟೆಯವರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಬೇದರಿಕೆ ಹಾಕಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಿಮ್ಮ ಬೇಡಿಕೆಗೆ ಇಂದು ಸಂಜೆಯವರೆಗೂ ಕಾಲಾವಕಾಶ ಕೊಡಿ ಅದನ್ನು ಬಂದ್ ಮಾಡುವ ಭರವಸೆ ನೀಡಿದರು.
ಸಿದಗೌಡ ಮೋದಗಿ, ರಾಜಕುಮಾರ ಟೋಪಣ್ಣವರ, ಸುಜೀತ್ ಮುಳಗುಂದ, ನಿತಿನ್ ಬೊಳಬಂದಿ, ಚುನ್ನಪ್ಪ ಪೂಜಾರಿ ಉಪಸ್ಥಿತರಿದ್ದರು.
ಪ್ರಕಟಣೆ ಹೊರಡಿಸಿದ್ದ ಎಪಿಎಂಸಿ: ಜೈಕಿಸಾನ್ ಖಾಸಗಿ ಮಾರುಕಟ್ಟೆಯವರು ರೈತರಿಂದ ಕಮಿಷನ್ ಪಡೆಯುವುದು. ರೈತರ ಹಿತಾಸಕ್ತಿ ಕಾಪಾಡುವಲ್ಲಿ ಕ್ರಮಕೈಗೊಂಡಿರುವುದಿಲ್ಲ ಎನ್ನುವುದು ಖಚಿತವಾದ ಹಿನ್ನೆಲೆಯಲ್ಲಿ ಕೃಷಿ ಮಾರಾಟ ಇಲಾಖೆ ಪರವಾನಿಗೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ರೈತರು ಎಪಿಎಂಸಿಗೆ ತಮ್ಮ ತರಕಾರಿಯನ್ನು ತರಬೇಕೆಂದು ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಕಟಣೆ ಹೊರಡಿಸಿದೆ.
ಖಾಸಗಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ವ್ಯವಹಾರದ ದಾಖಲಾತಿಗಳನ್ನು ನಿರ್ವಹಿಸಿರುವುದಿಲ್ಲ. ಕೃಷಿ ಉತ್ಪನ್ನಗಳ ಪಾರದರ್ಶಕ ಮಾರಾಟ ಪದ್ಧತಿ ಅಳವಡಿಸಿರುವುದಿಲ್ಲ. ರೈತರ ಮಾಹಿತಿಗಾಗಿ ದರಗಳ ಬೋರ್ಡಗಳನ್ನು ಪ್ರದರ್ಶಿಸಿರುವುದಿಲ್ಲ. ಮಾರಾಟವಾದ ನಂತರ ಕೃಷಿ ಉತ್ಪನ್ನಗಳಿಗೆ ನಿಗದಿಯಾದ ದರಗಳ ಮಾಹಿತಿಯನ್ನು ರೈತರಿಗೆ ನೀಡುತ್ತಿರುವುದಿಲ್ಲ ಎಂದು ಖಾಸಗಿ ಮಾರುಕಟ್ಟೆ ಬಂದ್ ಮಾಡಲಾಗಿದೆ.
ರೈತರ ಉತ್ಪನ್ನಗಳನ್ನು ಶೇಖರಿಸಿಡಲು ಶೈತ್ಯಾಗಾರದ ವ್ಯವಸ್ಥೆ ಇಲ್ಲದಿರುವುದು. ರೈತರಿಗೆ ಅನುಕೂಲವಾಗಲು ರಾಷ್ಟ್ರೀಕೃತ, ಶೆಡ್ಯೂಲ್ ಬ್ಯಾಂಕ್ ಗಳು ಇರುವುದಿಲ್ಲ. ರೈತರಿಗೆ ತಂಗಲು ರೈತ ಭವನದಲ್ಲಿ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿರುವುದಿಲ್ಲ. ತರಕಾರಿ ವ್ಯಾಪಾರದ ಲೆಕ್ಕಪತ್ರ ನಿರ್ವಹಣೆ ಮಾಡಿರುವುದಿಲ್ಲ ಆದ್ದರಿಂದ, ಸದರಿ ಖಾಸಗಿ ಮಾರುಕಟ್ಟೆ ಜಾಗದಲ್ಲಿ ವ್ಯಾಪಾರ ವಹಿವಾಟ ನಡೆಸುವುದು ಕಾನೂನಿಗೆ ವಿರುದ್ಧವಾಗಿರುತ್ತದೆ. ಸದರಿ ಜಾಗದಲ್ಲಿ ವ್ಯಾಪಾರ ವಹಿವಾಟು ನಡೆಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಲ್ಲಿ ವ್ಯಾಪಾರ ನಡೆಸುವ ವ್ಯಾಪಾರಸ್ಥರ ವಿರುದ್ಧ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರಡಿ ನಿಷೇಧಿಸಲಾಗಿದೆ.
ಆದ್ದರಿಂದ, ರೈತ ಬಾಂಧವರು ಕಂಗ್ರಾಳಿ ರಸ್ತೆಯಲ್ಲಿರುವ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರ್ಕೇ ಯಾರ್ಡ್ ನಲ್ಲಿ ತಮ್ಮ ತರಕಾರಿ ಉತ್ಪನ್ನಗಳನ್ನು ಮತ್ತು ಇತರೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ವಿನಂತಿಸಲಾಗಿದೆ.
ಖಾಸಗಿ ಮಾರುಕಟ್ಟೆ ಇಂದಿನಿಂದ ಬಂದ್
ಕೆಲ ನ್ಯೂನತೆಯ ಬಗ್ಗೆ ಪರಿಶೀಲನೆ ಮಾಡಬೇಕು. ಖಾಸಗಿ ಮಾರುಕಟ್ಟೆ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲಿ ಬರುವ ಮುಂಚೆಯೇ ರೈತರಿಗೆ ಖಾಸಗಿ ಮಾರುಕಟ್ಟೆ ತಾತ್ಕಾಲಿಕ ಬಂದ್ ಆಗುತ್ತದೆ ಎಂದು ತಿಳಿಸಿದ್ದೇವೆ ಎಂದಿದ್ದಾರೆ ಎಂದರು.
ಖಾಸಗಿ ಮಾರುಕಟ್ಟೆಯಲ್ಲಿ ಉಪ ಮಾರುಕಟ್ಟೆ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಜಿಲ್ಲಾಡಳಿತದಿಂದ ರೈತರ ಪರವಾಗಿದ್ದೇವೆ. 250 ಮಳಿಗೆಗಳಿವೆ. 100 ಮಳಿಗೆಗಳು ಆಕ್ಷನ್ ಮೂಲಕ ನೀಡಲಾಗಿದೆ. 248 ಜನ ವ್ಯಾಪಾರಿಗಳು ಇದ್ದಾರೆ ಎಂದರು.