- ಉದ್ಭೂರಿನಲ್ಲಿ ಡಾ.ವಿಷ್ಣುವರ್ಧನ್ 75ನೇ ಜನ್ಮದಿನ ಆಚರಣೆ
ಮೈಸೂರು : ಮೈಸೂರಿನ ಉದ್ಭೂರಿನಲ್ಲಿರುವ ಡಾ.ವಿಷ್ಣುವರ್ಧನ್ ಉದ್ಯಾನವನದಲ್ಲಿ ಗುರುವಾರ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ ಪುರಸ್ಕೃತ, ʼಸಾಹಸಸಿಂಹʼ ಡಾ.ವಿಷ್ಣುವರ್ಧನ್ ಅವರ 75ನೇ ಜನ್ಮದಿನವನ್ನು ಅಖಿಲ ಕರ್ನಾಟಕ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಆಚರಿಸಲಾಯಿತು.
ಉದ್ಭೂರಿನಲ್ಲಿ ಸ್ಥಾಪಿಸಲಾದ ಡಾ.ವಿಷ್ಣುವರ್ಧನ್ ಪ್ರತಿಮೆಗೆ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ ಮತ್ತವರ ಪತ್ನಿ ಕೀರ್ತಿ, ಪುತ್ರ ಜೇಷ್ಠವರ್ಧನ್ ಪೂಜೆ ಸಲ್ಲಿಸಿದರು.
ಈ ಸಂದರ್ಭ ಭಾರತೀ ವಿಷ್ಣುವರ್ಧನ್ ಮಾತನಾಡಿ ವಿಷ್ಣುವರ್ಧನ್ ಅವರು ಇಲ್ಲೇ ನಮ್ಮ ಜೊತೆಯಲ್ಲೇ ಇದ್ದಾರೆ. ಅವರು ಇರೋವರೆಗೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದಾರೆ. ಎಲ್ಲರೂ ಅವರ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಭಿಮಾನಿಗಳು ವಿದ್ಯಾವಂತರು, ಧೈರ್ಯವಂತರು, ಎಲ್ಲವನ್ನೂ ತಿಳಿದುಕೊಂಡಿರುವವರು, ಒಳ್ಳೆಯ ದಾರಿಯಲ್ಲಿ ನಡೆದರೆ ಭಗವಂತ ಯಾವತ್ತೂ ಒಳ್ಳೆಯದನ್ನೇ ಮಾಡುತ್ತಾನೆ. ನಿಮ್ಮನ್ನೆಲ್ಲ ನೋಡಿ ನಮಗೆ ಬಹಳ ಸಂತೋಷ ಆಗಿದೆ. ಹೀಗೆ ನಿಮ್ಮೆಲ್ಲರ ಪ್ರೀತಿ ನಮ್ಮ ಮೇಲಿರಲಿ, ಇವತ್ತು ನಮ್ಮ ಯಜಮಾನರ ಮೊಮ್ಮಗ ಜೇಷ್ಠವರ್ಧನ ಬಂದಿದ್ದಾನೆ ಎಂದರು.
ನಮ್ಮ ಬಗ್ಗೆ ನಿಮಗೆ ಗೊತ್ತಿದೆ. ನಿಮ್ಮ ಪ್ರೀತಿ ವಿಶ್ವಾಸ ಆ ಹುಡುಗನ ಮೇಲೂ ಇರಬೇಕು. ನಮ್ಮ ಕುಟುಂಬದ ಬಗ್ಗೆ ಯಾರಾದರೂ ಏನಾದರೂ ಇಲ್ಲದಿರುವುದನ್ನು ಹೇಳಿದರೆ ನಂಬಲು ಹೋಗಬೇಡಿ, ನೀವು ನಂಬಲ್ಲ ಎನ್ನುವ ನಂಬಿಕೆ ನನಗಿದೆ. ಯಾರಾದರೂ ಹೇಳಿದಾಗ ಮನಸ್ಸಿಗೆ ಕಷ್ಟವಾಗುತ್ತದೆ. ನಿಮಗೆ ತಿಳಿಯಬೇಕು ಅಂತಾದರೆ ಮನೆಗೆ ಬನ್ನಿ, ಮನೆಯವರೆಲ್ಲರೂ ಇರುತ್ತಾರೆ, ಕೇಳಿ ತಿಳಿದುಕೊಳ್ಳಿ, ಯಾರೋ ಏನೋ ಹೇಳಿದರು ಅಂತ ತಪ್ಪಾಗಿ ತಿಳಿದುಕೊಳ್ಳಬೇಡಿ ಅಷ್ಟೇ. ನಮ್ಮ ಅಭಿಮಾನಿಗಳು ಹಾಗಲ್ಲ ಅನ್ನೋ ನಂಬಿಕೆ ನಮಗಿದೆ ಎಂದು ಸ್ಪಷ್ಟಪಡಿಸಿದರು.
ಎಲ್ಲರಿಗೂ ಅವರ 75ನೇ ಹುಟ್ಟು ಹಬ್ಬದ ಶುಭಾಶಯಗಳು. ಇದು ಒಂದು ವಿಶೇಷದ ದಿನ. ನಿಮ್ಮೆಲ್ಲರ ಬೇಡಿಕೆಯನ್ನು ಕೇಳಿ ಕರ್ನಾಟಕ ರತ್ನವನ್ನು ಕೊಟ್ಟಿದ್ದಾರೆ. ಹಾಗಾಗಿ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಹೇಳೋದಕ್ಕೆ ಇಷ್ಟಪಡುತ್ತೇನೆ. ನಿಮ್ಮ ಸಂತೋಷ ನೋಡಿ ನನಗೆ ಮಾತನಾಡಲು ತೋಚುತ್ತಿಲ್ಲ. ಎಲ್ಲರೂ ಒಳ್ಳೆಯ ಕೆಲಸಗಳನ್ನು ಮಾಡಿ, ಚೆನ್ನಾಗಿರಿ, ಪ್ರೀತಿ ವಿಶ್ವಾಸದಿಂದ ಇರಿ, ಯಾರ ಮೇಲೂ ದ್ವೇಷ ಸಾಧಿಸಲು ಹೋಗಬೇಡಿ ಎಂದರು.
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಡಾ.ವಿಷ್ಣುವರ್ಧನ್ ಅವರ ಜನ್ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ರಕ್ತದಾನ ಸೇರಿದಂತೆ ಹಲವು ಸೇವಾಕಾರ್ಯಗಳನ್ನು ಹಮ್ಮಿಕೊಂಡಿದ್ದರು.