ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಹುಮತ ಮಾಡಿಯೇ ಮಾಡುತ್ತೇವೆ. ನಮ್ಮ ಕಬ್ಜಾ ಬಂದೇ ಬರುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಬೆಳಗಾವಿ ಗಾಂಧಿ ಭವನದಲ್ಲಿ ಕೆಎಂಎಫ್ ವಾರ್ಷಿಕ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾಧ್ಯವಾದಷ್ಟು ಅವಿರೋಧ ಆಯ್ಕೆ ಮಾಡುತ್ತೇವೆ. 12 ನಿರ್ದೇಶಕರನ್ನು ಗೆಲ್ಲಿಸಿಕೊಂಡು ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಕ್ಕೇರಿ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಕೆಲ ಕಡೆಗಳಲ್ಲಿ ಗಲಾಟೆಯಾಗುತ್ತಿದೆ. ಆದ್ದರಿಂದ ಚುನಾವಣೆ ಆಗಬೇಕು ಎಂದು ಕೆಲ ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬರಬಾರದು. ಬಂದರೆ ಇಂಥ ಗಲಾಟೆಯಾಗುತ್ತದೆ. ಹುಕ್ಕೇರಿ, ಕಿತ್ತೂರು, ರಾಮದುರ್ಗದಲ್ಲಿ ಯಾರ ಮೇಲೆ ಪ್ರೀತಿ ಇದೆಯೋ ಅವರು ಗೆಲ್ಲುವು ಸಾಧಿಸುತ್ತಾರೆ ಎಂದರು.
ರಮೇಶ ಕತ್ತಿ ಆರೋಪಕ್ಕೆ ಹುಕ್ಕೇರಿಯಲ್ಲಿಯೇ ಉತ್ತರ ಕೊಡುತ್ತೇನೆ. ಚುನಾವಣೆ ಬಂದ ಮೇಲೆ ರಾಜಕಾರಣ ಸರ್ಕಸ್ಸು ಇದ್ದೇ ಇರುತ್ತದೆ. ಹುಕ್ಕೇರಿ ತಾಲೂಕಿನಲ್ಲಿ ಉಸ್ತುವಾರಿ ಸಚಿವರು ಫೈಟ್ ಮಾಡುತ್ತಿದ್ದಾರೆ. ಸಮಾಧಾನದಿಂದ ನಾವು ಚುನಾವಣೆ ಮಾಡುತ್ತೇವೆ ಎಂದರು.
ರಾಜಕಾರಣದಲ್ಲಿ ತಂತ್ರಗಾರಿಕೆ ನಡೆಯುವುದೇ. ಅವಶ್ಯಕತೆ ಇದ್ದಲ್ಲಿ ಮಾಡೇ ಮಾಡುತ್ತೇವೆ. ಮತದಾರರಿಗೆ ಮತದಾನ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಬಂದಿಲ್ಲ ಎಂಬ ಪ್ರಶ್ನೆಗೆ ಕಾಗವಾಡ, ಅಥಣಿಯಲ್ಲಿ ನಾವು ಚುನಾವಣೆ ಮಾಡುವುದಿಲ್ಲ ಎಂದರು. ಇಂದಿನ ಸಭೆ ಬಹಳ ಅದ್ಧೂರಿಯಾಗಿ ಮಾಡಲಾಗಿದೆ. ಕಳೆದ ಬಾರಿ ಕೆಎಂಎಫ್ ನಲ್ಲಿ 13 ಕೋಟಿ ರೂ. ಲಾಭವಾಗಿದೆ. ಈ ಪೈಕಿ 10 ಕೋಟಿ ಲಾಭವನ್ನು ವಾಪಸ್ಸು ಅವರಿಗೆ ಕೊಡಲಾಗಿದೆ. 2 ಕೋಟಿ ಕಟ್ಟಡ ನಿರ್ಮಾಣಕ್ಕೆ ಕೊಡಲಾಗಿದೆ. ಕಳೆದ ಬಾರಿ 400 ಕೋಟಿ ವಹಿವಾಟು ಆಗಿತ್ತು. ಈ ಬಾರಿ ಹೆಚ್ಚಿಗೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಎಮ್ಮೆ ಹಾಲಿಗೆ ದರ ಕಡಿಮೆ ಇದೆ. ಅದಕ್ಕೂ ಹೆಚ್ಚಿನ ದರ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ನಮ್ಮ ಬೆಳಗಾವಿ ಹಾಲು ಒಕ್ಕೂಟ ಒಳ್ಳೆಯ ರೀತಿಯಲ್ಲಿ ನಡೆದಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 35 ಸಾವಿರ ರೈತರು ಕೆಎಂಎಫ್ ಗೆ ಹಾಲು ಕೊಡುತ್ತಾರೆ. ಅವರು ಮೃತಪಟ್ಟರೆ ರೈತ ಕಲ್ಯಾಣ ನಿಧಿಯಿಂದ 20 ಸಾವಿರ ಕೊಡುತ್ತಿದ್ದೇವೆ. ಈಗ ಇನ್ಸೂರೆನ್ಸ್ ಕವರ ಮಾಡಿ ಕೆಎಂಎಫ್ ಗೆ ಹಾಲು ಕೊಡುವ ರೈತರ ಮೃತಪಟ್ಟರೆ ಒಂದು ಲಕ್ಷ ಕೊಡುವ ವ್ಯವಸ್ಥೆ ಮಾಡಲಾಗಿದೆ. 50 ಲಕ್ಷ ಹಣ ತುಂಬುವುದು ಬರುತ್ತದೆ ಅದನ್ನು ನಾವೇ ಮಾಡುತ್ತೇವೆ ಎಂದರು. ಬೆಳಗಾವಿಯಲ್ಲಿ ಮೇಘಾ ಡೈರಿ ಮಾಡಲು ಸುಮಾರು 5 ಲಕ್ಷ ಲೀಟರ್ ಹಾಲು ಬರಬೇಕು. ಕಣಬರಗಿಯಲ್ಲಿ ವಿಶಾಲ ಪ್ರದೇಶದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಹೊಸ ಡೈರಿ ಸ್ಥಾಪನೆ ಮಾಡುವ ಯೋಚನೆ ಮಾಡಲಾಗಿದೆ ಎಂದರು.