ರಾಮನಗರ: “ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ. ಈ ಅಂಶ ನಿಮ್ಮ ತಲೆಯಲ್ಲಿರಲಿ. ಇದು ನಮ್ಮ ಜಿಲ್ಲೆ. ಇಲ್ಲಿಂದ ನಾನು ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಇಲ್ಲಿನ ಜನರಿಗೆ ಶಕ್ತಿ ನೀಡುವುದೇ ನನ್ನ ಆದ್ಯತೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಾನು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದಕ್ಕೆ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದೇನೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ನಾನು ಜಾತಿ ಮೇಲೆ ನಂಬಿಕೆಯಿಟ್ಟಿರುವವನಲ್ಲ. ನೀತಿ ಮೇಲೆ ನಂಬಿಕೆಯಿಟ್ಟಿರುವವನು. ಬಡವರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸುತ್ತಿದ್ದೇನೆ” ಎಂದರು.
“ರಾಮನಗರ ಕ್ಷೇತ್ರದ ಜನತೆಗೆ 100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಬೇಕು ಎಂದು ಜಿಲ್ಲೆಯ ಪ್ರತಿಧಿಗಳ ಸಭೆ ಕರೆದು ಈಗಾಗಲೇ ತೀರ್ಮಾನ ಮಾಡಲಾಗಿದೆ. “ಬಗರ್ ಹುಕುಂ ಸೇರಿದಂತೆ, ಭೂ ಸುಧಾರಣಾ ಕಾಯ್ದೆಯಡಿ ಮಂಜೂರಾತಿಗೆ ಬಾಕಿ ಇರುವ ಭೂಮಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.
“ದೇವರು ಅವಕಾಶ ಮಾತ್ರ ಕೊಡುತ್ತಾನೆ. ಸಿಕ್ಕಂತಹ ಅವಕಾಶವನ್ನು ಬಳಸಿಕೊಂಡು ಬಡ ಜನರ ಏಳಿಗೆ ಮಾಡದಿದ್ದರೆ ಅಧಿಕಾರವಿದ್ದು ಏನು ಲಾಭ? ಕನಕಪುರದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಮಹಿಳೆಯರ ಹೆಸರಿಗೆ ಈ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ನಾನು ಸುಮಾರು 8 ಸಾವಿರ ಮಂದಿಗೆ ಬಗರ್ ಹುಕುಂ ಜಮೀನು ನೀಡಿದ್ದೇನೆ. ಈಗ ಡಿ.ಕೆ.ಸುರೇಶ್ ಅವರಿಗೆ ಈ ಸಮಿತಿಯ ಜವಾಬ್ದಾರಿ ನೀಡಲಾಗಿದೆ.” ಎಂದರು.
“ಕುಮಾರಸ್ವಾಮಿ ಅವರು ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು, ಬಡವರಿಗೆ ನಿವೇಶನ ಹಂಚಲು ಆಗಲಿಲ್ಲ. ಹೀಗಿದ್ದ ಮೇಲೆ ರಾಜಕಾರಣ ಏಕೆ ಮಾಡಬೇಕು? ರಾಜಕೀಯ ಮಾಡುವ ಅವಕಾಶವನ್ನೇ ಜನತಾದಳದವರು ಕಳೆದುಕೊಂಡಿದ್ದಾರೆ” ಎಂದರು.
“ಮಾಜಿ ಸಚಿವ ಅಶ್ವಥ ನಾರಾಯಣ ಅವರು ಜಿಲ್ಲೆಗೆ ಬಂದಿದ್ದರು. ವೀರಾಧಿವೀರ ಗಂಡು. ಯಾರಾದರೂ ಗಂಡಸರು ಇದ್ದೀರಾ? ಎಂದು ಪ್ರಶ್ನಿಸಿದ್ದರು. ಅವರಿಗೂ ಸಹ ಒಂದೇ ಒಂದು ನಿವೇಶನ ಹಂಚಲು ಆಗಲಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಒಬ್ಬರಿಗೂ ಸಹಾಯ ಮಾಡಲು ಆಗಲಿಲ್ಲ.
“ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಬಿಎ ತೆಗೆದು ಹಾಕುವುದಾಗಿ ಯಾರೋ ಬಿಜೆಪಿ ನಾಯಕರು ಇತ್ತೀಚೆಗೆ ಹೇಳಿದ್ದಾರಂತೆ. ಮಿಸ್ಟರ್ ಅಶೋಕ್, ಅಶ್ವಥ ನಾರಾಯಣ, ಜನತಾ ದಳದ ನಾಯಕರೇ ನಿಮ್ಮ ಯಾರ ಹಣೆಯಲ್ಲೂ ಬದಲಾವಣೆ ಮಾಡುವ ಬಗ್ಗೆ ಬರೆದಿಲ್ಲ. ಅಶೋಕಣ್ಣಾ ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಲು 2028 ಕ್ಕೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ? ಈ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ನೀವು ಇನ್ನು ಅಧಿಕಾರ ಮರೆತುಬಿಡಿ” ಎಂದರು ವ್ಯಂಗ್ಯವಾಡಿದರು.
ಬಸವಣ್ಣನವರ ಕಾಲದಲ್ಲಿ ವಚಮ ಚಳುವಳಿಯ ನೇತೃತ್ವ ವಹಿಸಿದ್ದ ಹಿಂದುಳಿದ ವರ್ಗಕ್ಕೆ ಸೇರಿದ ಅಲ್ಲಮ ಪ್ರಭು ಅವರು ʼಕೊಟ್ಟ ಕುದುರೆಯನ್ನು ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನನ್ನೂ ಮಾಡದವರು ಇನ್ನೆಂದೂ ಕೆಲಸ ಮಾಡಲೂ ಸಾಧ್ಯವಿಲ್ಲ” ಎಂದು ಕುಟುಕಿದರು.