ವರದಿ: ಸ್ಟೀಫನ್ ಜೇಮ್ಸ್
ಧಾರವಾಡ : ಯುಟ್ಯೂಬ್, ಫೇಸ್ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಾಮಿಡಿ ವೀಡಿಯೋಗಳ ಮೂಲಕ ಜನಮನ್ನಣೆ ಪಡೆದುಕೊಂಡಿರುವ ಧಾರವಾಡದ ಯುಟ್ಯೂಬರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಇತನ ವಿರುದ್ಧ ಬಜರಂಗದಳದ ಕಾರ್ಯಕರ್ತರು ಮುಖಂಡರು ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದಾರೆ.
ಯುಟ್ಯೂಬರ್ ಖಾಜಾ ಶಿರಹಟ್ಟಿ ಉರ್ಫ್ ಮುಕಳೆಪ್ಪನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಮುಕಳೆಪ್ಪ ಮೂಲತಃ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದು, ಇವರು ಖೊಟ್ಟಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಖಾಜಾ ಊರ್ಫ್ ಮುಕಳೆಪ್ಪ ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಜೊತೆ ವೀಡಿಯೋ ಮಾಡುತ್ತಾನೆ.
ಶಾರ್ಟ್ ವೀಡಿಯೋದಲ್ಲಿ ಹಿಂದೂ ಯುವತಿಯರು ಹಾಗೂ ಧರ್ಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ವೀಡಿಯೋ ಮಾಡುತ್ತಾನೆ. ಕಳೆದ ಜೂನ್ 5 ರಂದು ಖೊಟ್ಟಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನು ಈತ ವಿವಾಹವಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದೀಗ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಮುಕಳೆಪ್ಪ ವಿವಾಹವಾಗಿರುವ ಯುವತಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸದ್ಯಕ್ಕಂತೂ ಮುಕಳೆಪ್ಪನ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರು ದೂರು ಕೊಟ್ಟಿದ್ದು, ಇನ್ನೂ ಎಫ್ಐಆರ್ ದಾಖಲಾಗಿಲ್ಲ. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಹಿಂದೂ ಯುವತಿಯರನ್ನೇ ವೀಡಿಯೋದಲ್ಲಿ ಹಾಕಿಕೊಂಡು ಹಿಂದೂ ಧರ್ಮದ ಹಾಗೂ ಹಿಂದೂ ಆಚರಣೆಗಳನ್ನೇ ಟಾರ್ಗೆಟ್ ಮಾಡಿ ಮುಕಳೆಪ್ಪ ವೀಡಿಯೋಗಳನ್ನು ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.



