Tuesday, September 23, 2025
Google search engine

Homeಅಪರಾಧಬೆಳಗಾವಿ: ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!

ಬೆಳಗಾವಿ: ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!

ವರದಿ: ಸ್ಟೀಫನ್ ಜೇಮ್ಸ್..

ಬೆಳಗಾವಿ/ಐನಾಪುರ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯೊಂದು ಜನರ ಗಮನ ಸೆಳೆದಿದೆ. ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ಲಾರಿಗೆ ಸಾರ್ವಜನಿಕರು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ಅಪಾರ ಪ್ರಮಾಣದ ಗೋಮಾಂಸವನ್ನು ಸಾಗಿಸುತ್ತಿದ್ದರೆಂಬ ಸುಳಿವು ಸಾರ್ವಜನಿಕರಿಗೆ ದೊರಕಿತ್ತು. ಇದನ್ನು ಆಧರಿಸಿ, ಬೆಳಗಾವಿ ಜಿಲ್ಲೆಯ ಐನಾಪುರ ಗ್ರಾಮದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿಯ ಹತ್ತಿರ ರಾತ್ರಿ 10 ಗಂಟೆಯ ಸುಮಾರಿಗೆ ಲಾರಿಯನ್ನು ತಡೆ ಹಿಡಿದು ಪರಿಶೀಲಿಸಲಾಯಿತು. ಚಾಲಕರನ್ನು ವಿಚಾರಿಸಿದ ನಂತರ ವಾಹನವನ್ನು ತಪಾಸಣೆ ಮಾಡಿದಾಗ ಸುಮಾರು ಐದು ಟನ್ ಗೂ ಹೆಚ್ಚು ಗೋಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಬಳಿಕ ಆಕ್ರೋಶಗೊಂಡ ಜನರು ಲಾರಿಗೆ ಬೆಂಕಿ ಹಚ್ಚಿದರು. ಬೆಂಕಿ ಶಮನ ದಳ ಹಾಗೂ ಉಗಾರ ಸಕ್ಕರೆ ಕಾರ್ಖಾನೆ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಲಾರಿ ಸಂಪೂರ್ಣವಾಗಿ ಸುಟ್ಟುಹೋಯಿತು.

ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಗವಾಡ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಐನಾಪುರ ಗ್ರಾಮ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ಇಬ್ಬರು ಡಿಎಸ್‌ಪಿ, ನಾಲ್ಕು ಸಿಪಿಐ, ಎಂಟು ಪಿಎಸ್‌ಐ ಸೇರಿ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

 ಎರಡು ಪ್ರತ್ಯೇಕ ಪ್ರಕರಣ ದಾಖಲು :

ಪೊಲೀಸ್ ಇಲಾಖೆಯ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಿಸಲಾಗಿದೆ. ಅಕ್ರಮ ಮಾಂಸ ಸಾಗಾಣಿಕೆಗೆ ಸಂಬಂಧಿಸಿ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಪ್ರಾಣಿ ಹಿಂಸೆ ಕಾಯ್ದೆ ಅಡಿ ಇಬ್ಬರನ್ನು ಬಂಧಿಸಲಾಗಿದೆ.

ಅದೇ ರೀತಿ, ಲಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ದರೋಡೆ ಹಾಗೂ ಅಟ್ರಾಸಿಟಿ ಕಾಯ್ದೆ ಅಡಿ ಐವರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ತೀವ್ರಗೊಳಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ SP ಭೀಮಶಂಕರ ಗುಳೇದ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular