ಚಾಮರಾಜನಗರ : ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಾದಪ್ಪನ ದೇವಸ್ಥಾನ ಸುತ್ತಮುತ್ತ ಶ್ರೀಗಂಧ ಕಳ್ಳತನ ಮಾಡ್ತಿದ್ದ ಖದೀಮ ಅಂದರ್ ಆಗಿದ್ದಾನೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತನನ್ನು ತಮಿಳುನಾಡು ಮೂಲದ ಸೆಡೆಯಾನ್ ಎಂದು ಗುರುತಿಸಲಾಗಿದೆ. ಆರೋಪಿ ಬೆಟ್ಟದ ಆನೆತಲೆದಿಂಬ ಬಳಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ. ಬಂಧಿತನಿಂದ 33 ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ಅನೇಕ ದಿನಗಳಿಂದ ಆರೋಪಿ ಈ ಕೃತ್ಯ ಎಸಗಿರಬಹುದು ಎಂದು ಅರಣ್ಯ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಭಕ್ತರಂತೆ ಬಂದು ಗಂಧ ಕಳ್ಳತನಕ್ಕೆ ಯತ್ನಿಸುತ್ತಿದ್ದ ಬಾಲಕನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈತನ ಜೊತೆಗಿದ್ದ ಇಬ್ಬರು ಪರಾರಿಯಾಗಿದ್ದಾರೆ. ಹನೂರು ತಾಲೂಕಿನ ಕೊಕ್ಕಬೋರೆ ಪ್ರದೇಶದ ದೊಡ್ಡ ಬರೇಹಳ್ಳದ ಬಳಿ ಶ್ರೀಗಂಧ ಮರ ಕತ್ತರಿಸುವ ವೇಳೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಬಾಲಕ ಸಿಕ್ಕಿಬಿದ್ದಿದ್ದಾನೆ.ಕಳ್ಳರು ಭಕ್ತರ ವೇಷದಲ್ಲಿ ಬೆಟ್ಟಕ್ಕೆ ಬಂದು ಮಲೆ ಮಹದೇಶ್ವರ ವನ್ಯಧಾಮದ ಮೀಸಲು ಅರಣ್ಯ ಪ್ರದೇಶ ಪ್ರವೇಶಿಸುತ್ತಿದ್ದರು. ಅಲ್ಲಿ ಗಂಧದ ಮರಗಳನ್ನು ಕತ್ತರಿಸಿ ಕೊಂಡೊಯ್ಯುತ್ತಿದ್ದರು. ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾದ ಶ್ರೀಗಂಧ ಕಳ್ಳರನ್ನು ಪೆರುಮಾಳ್ ಹಾಗೂ ಮುರುಗನ್ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಅರಣ್ಯದಲ್ಲಿ ಅನುಮಾನಾಸ್ಪದವಾಗಿ ಯಾರು ಓಡಾಡ್ತಾರೆ ಅಂತಹ ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಶ್ರೀಗಂಧ ಕಳ್ಳರು ಹೆಚ್ಚಾಗಿದ್ದಾರೆ. ಹೀಗಾಗಿ ಗಸ್ತನ್ನು ಹೆಚ್ಚು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು, ರೈಲಿನಲ್ಲಿ ಕಳ್ಳತನ ಪ್ರಕರಣಗಳು ಮತ್ತೆ ಮುನ್ನಲೆಗೆ ಬಂದಿದ್ದು, ಕಾರವಾರದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಮತ್ತು ಬರುವ ಚಾಕಲೇಟ್ ನೀಡಿ ಬಳಿಕ ಆತನ ಬಳಿಯಿದ್ದ ಸುಮಾರು 4. 86 ಲಕ್ಷ ರೂ. ಮೌಲ್ಯದ ಹಣ ಹಾಗೂ ಚಿನ್ನಾಭರಣವನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.
ಆ.10 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಹರೀಶ್ ಎಂಬುವವರು ಕಾರವಾರದಿಂದ ಮಂಗಳೂರಿಗೆ ರೈಲಿನ ಮೂಲಕ ಬರುತ್ತಿದ್ದರು. ಈ ವೇಳೆ ಭಟ್ಕಳದಲ್ಲಿ ರೈಲು ಹತ್ತಿದ್ದ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯೋರ್ವ ಹರೀಶ್ ಜೊತೆ ಪರಿಚಯ ಮಾಡಿಕೊಂಡಿದ್ದಾನೆ.
ಹೀಗೆ ಪರಿಚಯವಾದಾಗ ಕೆಲ ಹೊತ್ತು ತಮ್ಮ ತಮ್ಮ ಬಗ್ಗೆ ಇಬ್ಬರು ಹೇಳಿಕೊಂಡಿದ್ದಾರೆ. ಬಳಿಕ ಸ್ನೇಹದ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ತನ್ನ ಬಳಿಯಿದ್ದ ಚಾಕಲೇಟ್ ಅನ್ನು ಹರೀಶ್ ಗೆ ನೀಡಿದ್ದಾನೆ. ಅದನ್ನು ಸ್ವೀಕರಿಸಿದ ಹರೀಶ್ ಚಾಕ್ಲೇಟ್ ಅನ್ನು ತಿಂದಿದ್ದಾನೆ.
ಚಾಕಲೇಟ್ ತಿಂದ ಕೆಲ ನಿಮಿಷದಲ್ಲೇ ಹರೀಶ್ ಗಾಢ ನಿದ್ದೆಗೆ ಜಾರಿದ್ದಾರೆ. ಹೀಗೆ ನಿದ್ದೆಗೆ ಜಾರಿದವರಿಗೆ ಬೆಳಗ್ಗೆಯೇ ಎಚ್ಚರವಾಗಿದ್ದು, ಕಣ್ಣು ಬಿಟ್ಟು ನೋಡಿದಾಗ ಕೈಯಲ್ಲಿದ್ದ ಬ್ಯಾಗು ಸೇರಿದಂತೆ ಕುತ್ತಿಗೆಯಲ್ಲಿದ್ದ ಸುಮಾರು 28ಗ್ರಾಂ ನ 2,35,000 ರೂ. ಬೆಲೆಬಾಳುವ ಸರ, 8 ಗ್ರಾಂ ತೂಕದ 70 ಸಾವಿರ ಬೆಲೆಬಾಳುವ ಉಂಗುರ, ವಾಚ್, ಮೊಬೈಲ್, ಪರ್ಸ್, ಹಾಗೂ ಬ್ಯಾಗ್ ನಲ್ಲಿದ್ದ 145,000 ರೂ. ನಗದನ್ನು ಕದ್ದು ಪರಾರಿಯಾಗಿದ್ದಾನೆ.
ನಗದು, ಸರ, ಉಂಗುರ ಸೇರಿದಂತೆ ಒಟ್ಟು 4,86,500 ರೂ. ಮೌಲ್ಯದ ಚಿನ್ನಾಭರಣ ವಸ್ತುಗಳನ್ನು ಅಪರಿಚಿತ ವ್ಯಕ್ತಿ ಕದ್ದೋಯ್ದಿದ್ದಾನೆ. ಸದ್ಯ ಈ ಪ್ರಕರಕ್ಕೆ ಸಂಬಂಧಪಟ್ಟಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.