ಮೈಸೂರು : ಸೆಪ್ಟೆಂಬರ್ 24 ರಂದು ನಿಧನರಾಗಿದ್ದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ಅಂತ್ಯಕ್ರಿಯೆ ನಿನ್ನೆ ನಡೆಸಲಾಗಿದ್ದು, ಇಂದು ಕಾವೇರಿ ನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಲಾಗಿದೆ.
ಶ್ರೀರಂಗಪಟ್ಟಣದ ರಂಗನಾಥ ಸ್ಥಾನ ಘಟ್ಟದಲ್ಲಿ ಭೈರಪ್ಪ ಕುಟುಂಬ ಸದಸ್ಯರು ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಪುತ್ರರಾದ ರವಿಶಂಕರ್, ಉದಯ್ ಶಂಕರ್ ಅಸ್ಥಿ ವಿಸರ್ಜನೆ ಮಾಡಿದ್ದಾರೆ.
ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು, ನಿನ್ನೆ ಪಂಚಭೂತಗಳಲ್ಲಿ ಲೀನವಾದರು. ಮೈಸೂರು ಬೆಟ್ಟದ ತಪ್ಪಲಿನಲ್ಲಿರುವ ಚಿರಶಾಂತಿಧಾಮದಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಇಬ್ಬರು ಪುತ್ರರಾದ ರವಿ ಶಂಕರ್ ಹಾಗು ಉದಯ್ ಶಂಕರ್ ಅಂತಿಮ ವಿಧಿ ವಿಧಾನದ ಬಳಿಕ ಅಂತ್ಯಕ್ರಿಯೆ ನೆರವೇರಿಸಿದರು. ಪುತ್ರಿ ಸಹನಾ ವಿಜಯಕುಮಾರ್, ಸಚಿವರಾದ ಡಾ.ಎಚ್ ಸಿ ಮಹದೇವಪ್ಪ. ವೆಂಕಟೇಶ್. ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.