Saturday, October 4, 2025
Google search engine

Homeರಾಜ್ಯಭೀಮಾ ನದಿ ಪ್ರವಾಹ: ಲಕ್ಷಾಂತರ ಬೆಳೆ ನಾಶ: ರಾಜ್ಯ ಸರ್ಕಾರದಿಂದ ₹2,500 ಕೋಟಿ ಪರಿಹಾರದ ಭರವಸೆ

ಭೀಮಾ ನದಿ ಪ್ರವಾಹ: ಲಕ್ಷಾಂತರ ಬೆಳೆ ನಾಶ: ರಾಜ್ಯ ಸರ್ಕಾರದಿಂದ ₹2,500 ಕೋಟಿ ಪರಿಹಾರದ ಭರವಸೆ

ಕಲಬುರಗಿ: ಇತ್ತೀಚಿಗೆ ರಾಜ್ಯದ ಉತ್ತರ ಭಾಗಗಳಲ್ಲಿ ಮುಖ್ಯವಾಗಿ ಕಲಬುರಗಿ ಜಿಲ್ಲೆಯಲ್ಲಿ ತೀವ್ರ ಪ್ರವಾಹ ಉಂಟಾಗಿ ಹಲವಾರು ಹಳ್ಳಿಗಳ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಭೀಮಾ ನದಿ ಉಕ್ಕಿ ಹರಿದಿದ್ದು, ನದಿ ಪಾತ್ರದ ಜನಜೀವನ ಅಸ್ತವ್ಯಸ್ತವಾಗಿದೆ. ಸದ್ಯ ಭೀಮಾ ನದಿ ದಡದ ಅಫಜಲಪುರ, ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕಿನ ಭೀಮಾ ನದಿ ದಡದಲ್ಲಿ ಪ್ರವಾಹ ಕಡಿಮೆಯಾಗಿದ್ದು, ಜನರು ಕಾಳಜಿ ಕೇಂದ್ರಗಳಿಂದ ತಮ್ಮ ಮನೆಗಳಿಗೆ ಮರಳಿದ್ದಾರೆ. ಆದರೆ ಅಲ್ಲಿ ಅವರಿಗೆ ಶಾಕ್‌ ಎದುರಾಗಿದೆ.

ಹೌದು, ಕಳೆದ 10 ದಿನಗಳಿಂದ ಉಂಟಾದ ಭೀಮಾ ನದಿ ಪ್ರವಾಹದಿಂದ ಕಲಬುರಗಿ ಜಿಲ್ಲೆಯ ಮೂರು ತಾಲೂಕಿನ ಒಟ್ಟು 117 ಗ್ರಾಮಗಳು ನಲುಗಿ ಹೋಗಿವೆ. ಈಗ ಪ್ರವಾಹ ಕಡಿಮೆಯಾದ ಹಿನ್ನಲೆ ಸಂತ್ರಸ್ಥರು ಮನೆಗೆ ಬಂದು ಅಳಿದುಳಿದ ವಸ್ತುಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಮಳೆ ಹಾಗೂ ಭೀಮಾ ಪ್ರವಾಹದಿಂದ ಕಲಬುರಗಿ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ನದಿ ಪಾಲಾಗಿವೆ.

ಕೇವಲ 15 ದಿನ ಕಳೆದಿದ್ದರೆ ಕೈಗೆ ಬರಲಿದ್ದ ರೈತರ ಬಿಳಿ ಬಂಗಾರ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಹತ್ತಿ ಕೂಡಾ ಭೀಮಾ‌ನದಿ ಪ್ರವಾಹ ಪಾಲಾಗಿದೆ. ಇಡೀ ವರ್ಷ ಕಷ್ಟಪಟ್ಟು ಬೆಳೆದ ಫಸಲು ಕೈಗೆಸಿಗಲಿಲ್ಲವಲ್ಲಾ ಎಂದು ರೈತರು ದಿಕ್ಕುತೋಚದಂತಾಗಿದ್ದಾರೆ. ಈಗ ಉಂಟಾಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ಕೊಡದೇ ಹೋದರೆ ಆತ್ಮಹತ್ಯೆಯೇ ಕೊನೇಯ ದಾರಿ ಎಂದು ಅನ್ನದಾತರು ಕಣ್ಣೀರು ಹಾಕಿದ್ದಾರೆ.

ಮತ್ತೊಂದೆಡೆ ಭೀಮಾ ನದಿಯ ಪ್ರವಾಹಕ್ಕೆ ಜೆಸ್ಕಾಂ ಟ್ರಾನ್ಸಫಾರ್ಮರ್, ಎಲೆಕ್ಟ್ರಿಕ್ ಪೋಲ್​​ಗಳು ಸಹ ನೀರಿನಲ್ಲಿ‌ ಕೊಚ್ಚಿ ಹೋಗಿದ್ದು, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜೇಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೀಮಾ ಹಾಗೂ ಕಾಗಿಣಾ ನದಿ ಪ್ರವಾಹದಿಂದ 270 ಟ್ರಾನಫಾರ್ಮರ್, 600 ಕ್ಕೂ ಹೆಚ್ಚು ಪೋಲ್​ಗಳು ಹಾಳಾಗಿರುವದು ಪ್ರಾಥಮಿಕ ಪರಿಶೀಲನೆಯಲ್ಲಿ ಕಂಡು ಬಂದಿದೆ. ಈ ಮೂಲಕ ಜೇಸ್ಕಾಂ ಇಲಾಖೆಗೂ ಸಹ ಕೋಟ್ಯಂತರ ರೂ ಹಣ ನಷ್ಟವಾಗಿದೆ.

ಭೀಮಾ ನದಿ ಪ್ರವಾಹದ ವಿಚಾರವಾಗಿ 2,500 ಕೋಟಿ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ ಎಲ್ಲಕ್ಕೂ ಮೊದಲು ಸರ್ಕಾರ ಸೂರು ಕಳೆದುಕೊಂಡವರಿಗೆ ಮನೆ ಹಾಗೂ ಧವಸ ಧಾನ್ಯ ಕಳೆದುಕೊಂಡವರಿಗೆ ಅನ್ನ ಕೊಡುವ ಕೆಲಸ ಮಾಡಬೇಕಾಗಿದೆ.

ಇನ್ನು ಬೀದರ್ ಜಿಲ್ಲೆಯ ಕಾರಂಜಾ ಜಲಾಶಯ ಹಾಗೂ ಮಹಾರಾಷ್ಟ್ರದ ಧನೆಗಾಂವ್ ಡ್ಯಾಂನಿಂದ ನೀರು ಮಾಂಜ್ರಾ ನದಿಗೆ ನಿಂತರವಾಗಿ ಹರಿಬಿಡಲಾಗುತ್ತಿದೆ. ಇದರಿಂದಾಗಿ ಬೀದರ್ ತಾಲೂಕಿನ ಹಿಪ್ಪಳಗಾಂವದಲ್ಲಿ ಸುಮಾರು 12 ಎಕರೆಗೂ ಅಧಿಕ ಬೆಳೆ ಹಾನಿಯಾಗಿದೆ. ಸಾಲ ಮಾಡಿ ಬಿತ್ತಿದ ಬೆಳೆ ಕೈಗೆ ಬರುವಷ್ಟರಲ್ಲಿ ಮಣ್ಣು ಪಾಲಾಗುತ್ತಿದೆ ಎಂದು ರೈತರು ಮರುಗಿದ್ದಾರೆ.

RELATED ARTICLES
- Advertisment -
Google search engine

Most Popular