ರಾಮನಗರ: ರಾಮನಗರ ಜಿಲ್ಲೆಯಲ್ಲಿ ದುರಂತ ಘಟನೆ ನಡೆದಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಆನೆಯೊಂದು ವಿದ್ಯುತ್ ತಂತಿ ತಗುಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಚನ್ನಪಟ್ಟಣ ತಾಲೂಕಿನ ಚಿಕ್ಕವಿಠಲೇನ ಹಳ್ಳಿಯಲ್ಲಿ ನಡೆದಿದೆ.
ಘಟನೆ ಗ್ರಾಮದ ಶಿವಕುಮಾರ್ ಎಂಬುವವರ ಜಮೀನಿನಲ್ಲಿ ನಡೆದಿದೆ. ಶಿವಕುಮಾರ್ ತಗಚಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೀತ ಅವರ ಪತಿಯಾಗಿದ್ದಾರೆ. ಶುಕ್ರವಾರ ರಾತ್ರಿ ಕಾಡಾನೆ ಶಿವಕುಮಾರ್ ಅವರ ಜಮೀನಿನಲ್ಲಿ ತೆಂಗಿನ ಮರದ ಸುಳಿಯನ್ನು ಕಿತ್ತು ತಿನ್ನಲು ಯತ್ನಿಸುತ್ತಿತ್ತು. ಆಗ ವಿದ್ಯುತ್ ತಂತಿ ತಗುಲಿ ಆನೆ ಸ್ಥಳದಲ್ಲೇ ಸಾವಿಗೀಡಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆಯಾ ಅಥವಾ ಜಮೀನಿಗೆ ಕೊಟ್ಟಿದ್ದ ಕರೆಂಟ್ ನಿಂದ ಸಾವನ್ನಪ್ಪಿದೆಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ.