- ಕೊಪ್ಪಳ: ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕೈಬೀಸಿ ಕರೆಯುತ್ತಿದೆ ಐತಿಹಾಸಿಕ ಬೃಹತ್ ವೇದಿಕೆ

ಕೊಪ್ಪಳ : ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ 2000 ಕೋಟಿ ರೂ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆಗಾಗಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಭಾಗಿಯಾಗಲಿರುವ ಬೃಹತ್ ವೇದಿಕೆಯು ಹೊಸಪೇಟೆ ರಸ್ತೆಯ ಜಿಲ್ಲಾಡಳಿತ ಭವನದಿಂದ ಅಣತಿ ದೂರದಲ್ಲಿರುವ ಅಗಡಿ ಲೇಔಟನಲ್ಲಿ ಬೃಹತ್ ಪ್ರಮಾಣದಲ್ಲಿ ಸಿದ್ಧಗೊಂಡಿದ್ದು, ಜನರನ್ನು ಆಕರ್ಷಿಸುತ್ತಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತದಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಕೊಪ್ಪಳ ತಾಲೂಕಿನ ಇತಿಹಾಸದಲ್ಲೆ ಇದೇ ಮೊದಲು ಎನ್ನುವಂತೆ ಅತ್ಯಂತ ದೊಡ್ಡಮಟ್ಟದಲ್ಲಿ ಸಿದ್ಧಗೊಂಡ ಮುಖ್ಯವೇದಿಕೆಯು ಕೇಸರಿ, ಬಿಳಿ, ಹಸಿರು ಧ್ವಜದ ಬಣ್ಣದ ಬಟ್ಟೆಯಿಂದ ಅಲಂಕೃತಗೊಂಡಿದೆ.

ಸಮಾವೇಶಕ್ಕಾಗಿ ಆಗಮಿಸಲಿರುವ ಲಕ್ಷಾಂತರ ಸಂಖ್ಯೆಯ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಮತ್ತು ಜನರಿಗೆ ಕಾರ್ಯಕ್ರಮದ ವೀಕ್ಷಣೆಗೆ ಅನುಕೂಲವಾಗುವಂತೆ ಮುಖ್ಯ ವೇದಿಕೆಯ ಇಕ್ಕೇಳಗಳಲ್ಲಿ ಸಹ ಬೃಹಧಾಕಾರದ ಪರದೆ, ಪೆಂಡಾಲ್, ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಎಲ್ಲೆಡೆ ಸ್ವಾಗತ ಕಮಾನು: ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಅನೇಕ ಹಿರಿಯ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಗಣ್ಯರ ಸ್ವಾಗತದ ಕಮಾನುಗಳು ಎಲ್ಲೆಡ ರಾರಾಜಿಸುತ್ತಿವೆ.
ಭದ್ರತೆಗಾಗಿ ಕ್ಯಾಮರಾ: ಮುಖ್ಯ ಹಾಗೂ ಸಮಾನಾಂತರ ಮೂರೂ ಬೃಹತ್ ವೇದಿಕೆಯಲ್ಲಿ ಸುರಕ್ಷತೆಗೆ ಅನುಕೂಲವಾಗುವಂತೆ ಎಲ್ಲಾ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಪಿಕ್ಸ್ ಮಾಡಲಾಗಿದೆ.
ಎಲ್ಲೆಡೆ ಖಾಕಿಪಡೆ: ಮಹತ್ವದ ಕಾರ್ಯಕ್ರಮವು ಯಶ ಕಾಣುವ ದಿಶೆಯಲ್ಲಿ ಸೂಕ್ತ ಭದ್ರತೆಗಾಗಿ ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ ನೇತೃತ್ವದಲ್ಲಿ ಪೊಲೀಸ್ ಇಲಾಖೆಯು ಸನ್ನದ್ದವಾಗಿದ್ದು, ಕೊಪ್ಪಳ ಸೇರಿದಂತೆ ಸುತ್ತಲಿನ ವಿಜಯನಗರ, ರಾಯಚೂರ, ಬಳ್ಳಾರಿ, ಯಾದಗಿರಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಖಾಕಿಪಡೆಯು ಕಾರ್ಯಕ್ರಮದ ಸ್ಥಳದಲ್ಲಿ ತಂಡೋಪತಂಡವಾಗಿ ಸೇರಿದೆ.
ಸವಲತ್ತು ವಿತರಣೆಗೆ ಸಜ್ಜು: ಬೃಹತ್ ಪ್ರಮಾಣದಲ್ಲಿ ಕೃಷಿ, ತೋಟಗಾರಿಕಾ ಹಾಗೂ ಇನ್ನೀತರ ಸಲಕರಣೆಗಳು ಮತ್ತು ಯಂತ್ರಗಳನ್ನು ವೇದಿಕೆಯ ಪಕ್ಕದಲ್ಲಿ ಇಡಲಾಗಿದ್ದು, ಈ ಸವಲತ್ತು ವಿತರಣೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.