Tuesday, October 7, 2025
Google search engine

Homeರಾಜ್ಯಕೆಯುಡಬ್ಲೂಜೆ ಗ್ರಂಥಾಲಯ ಉದ್ಘಾಟನೆ: ನಿರಂತರ ಪುಸ್ತಕಗಳ ಓದಿನ ಅಭಿರುಚಿಯಿಂದ ಜ್ಞಾನ ಸಂಪಾದನೆ ಸಾಧ್ಯ: ಜಿಲ್ಲಾಧಿಕಾರಿ ಜಗದೀಶ್

ಕೆಯುಡಬ್ಲೂಜೆ ಗ್ರಂಥಾಲಯ ಉದ್ಘಾಟನೆ: ನಿರಂತರ ಪುಸ್ತಕಗಳ ಓದಿನ ಅಭಿರುಚಿಯಿಂದ ಜ್ಞಾನ ಸಂಪಾದನೆ ಸಾಧ್ಯ: ಜಿಲ್ಲಾಧಿಕಾರಿ ಜಗದೀಶ್

ವರದಿ: ಸ್ಟೀಫನ್ ಜೇಮ್ಸ್

ಬೆಂಗಳೂರು: ಇಂದಿನ ಡಿಜಿಟಲ್ ಯುಗದಿಂದಾಗಿ ಪುಸ್ತಕ ಓದುವ ಹವ್ಯಾಸವು ದೂರವಾಗಿರುವುದು ವಿಷಾದಕರ. ಪತ್ರಕರ್ತರು ನಿರಂತರವಾಗಿ ಓದುವ ಹವ್ಯಾಸದಲ್ಲಿ ತೊಡಗಿಕೊಂಡರೆ ಮಾತ್ರ ಜ್ಞಾನ ಸಂಪಾದಿಸಿಕೊಂಡು, ವೃತ್ತಿ ಬದ್ಧತೆ ತೋರಿಸಲು ಸಾಧ್ಯ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯಪಟ್ಟರು.

ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜಿ) ಕಚೇರಿಯಲ್ಲಿ ಸಂಘದ ಸದಸ್ಯರಿಗಾಗಿ ಸ್ಥಾಪಿಸಿರುವ ಗ್ರಂಥಾಲಯ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳೇ ರಾರಾಜಿಸುತ್ತವೆ. ಪತ್ರಕರ್ತರು ಸದಾ ವಸ್ತುನಿಷ್ಠ ವರದಿಗಳಿಗೆ ಗಮನ ನೀಡಿದರಷ್ಟೇ ಪತ್ರಿಕೋದ್ಯಮ ಮೌಲ್ಯ ಉನ್ನತಿಗೇರಲು ಸಾಧ್ಯ ಎಂದೂ ಅವರು ಹೇಳಿದರು. ಜಿಲ್ಲಾಧಿಕಾರಿಯಾಗಿ ನಾನು ಬಂದ ಮೇಲೆ ಬೆಂಗಳೂರಿನಲ್ಲಿ ಸುಮಾರು 300 ಎಕರೆ ಅಕ್ರಮ ಒತ್ತುವರಿ ತೆರವು ಮಾಡಲಾಗಿದೆ. ಯಾವುದೇ ಸಂದರ್ಭಗಳಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ತನ್ನಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ, ಪುಸ್ತಕಗಳು ಜ್ಞಾನದ ಭಂಡಾರವಾಗಿದ್ದು, ಪತ್ರಕರ್ತರು ಪುಸ್ತಕಗಳ ಓದಿನತ್ತ ಹೆಚ್ಚಿನ ಒಲವನ್ನು ತೋರಿಸಿದರೆ ಮಾತ್ರ ಪ್ರಬುದ್ಧರಾಗಲು ಸಾಧ್ಯ. ಸಾಹಿತ್ಯ ಕೃತಿಗಳು ಪತ್ರಕರ್ತರಿಗೆಂದೂ ಮಾರ್ಗದರ್ಶಿಯಾಗುತ್ತವೆ. ಇದನ್ನು ತಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದೇವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಈಗಾಗಲೇ ನಮ್ಮ ಸಂಘವು ತನ್ನ ಸದಸ್ಯರಿಗೆ ಹಲವು ಸೌಲಭ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಆ ನಿಟ್ಟಿನಲ್ಲಿ ಇದೀಗ ಗ್ರಂಥಾಲಯವೂ ಕೂಡಾ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಸಂಘದ ರಾಜ್ಯ ಉಪಾಧ್ಯಕ್ಷರುಗಳಾದ ಭವಾನಿ ಸಿಂಗ್ ಠಾಕೂರ್, ಅಜಮಾಡು ಕುಟ್ಟಪ್ಪ, ಪುಂಡಲೀಕ ಬಾಳೋಜಿ, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ ಕೆರೆಗೋಡು, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ ಮತ್ತು ಸಂಘದ ವಿವಿಧ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular