- ಏಳು ಜನ ಮಾಹಿತಿ ಕೇಳಿದರೂ ಜಿಲ್ಲಾಡಳಿತ ಗಪ್ ಚುಪ್ ಸರ್ಕಾರದ ಅನುದಾನಕ್ಕೆ ಲೆಕ್ಕ ಕೊಡಲ್ಲ ಅಂದ್ರೆ ಹೇಗೆ?
ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮಳ ಹೆಸರಿನಲ್ಲಿ ನಡೆಯುವ ರಾಜ್ಯಪ್ರಸಿದ್ದ ಕಿತ್ತೂರು ಉತ್ಸವದ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪವನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾಡಿದ್ದಾರೆ. ಕಳೆದ ಅಕ್ಟೋಬರ್ 23, 24, 25 ರಂದು ನಡೆದ ಕಿತ್ತೂರು ಉತ್ಸವಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ ಆ ಅನುದಾನದ ಲೆಕ್ಕಪತ್ರವನ್ನು ಯಾವುದೇ ಪ್ರಾಧಿಕಾರ ನೀಡಿಲ್ಲ ಎಂದು ಗಡಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಳೆದ 27 ಜನವರಿ 2025 ರಂದು ನಿರ್ಮಿತಿ ಕೇಂದ್ರದವರಿಗೆ ಮಾಹಿತಿ ಹಕ್ಕಿನಡಿ ಅನುದಾನ ವೆಚ್ಚದ ವಿವರ ಕೇಳಿದ್ದೆ. ಆದರೆ ಅವರು ಮಾಹಿತಿ ನೀಡದೆ ವಿಳಂಬ ಮಾಡುತ್ತಿದ್ದಾರೆ. ನಂತರ ಉಪ ಆಯುಕ್ತರಿಗೆ ಅಫೀಲು ಸಲ್ಲಿಸಿದರೂ ಇನ್ನೂ ಯಾವುದೇ ಉತ್ತರ ಬಂದಿಲ್ಲ,” ಎಂದು ಗಡಾದ ತಿಳಿಸಿದ್ದಾರೆ.
ಈ ರೀತಿಯ ಅಸ್ಪಷ್ಟ ವ್ಯವಹಾರದಿಂದ ಭ್ರಷ್ಟಾಚಾರ ನಡೆದಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ತನಿಖೆ ಆಗುವವರೆಗೆ ಹೊಸ ಕಿತ್ತೂರು ಉತ್ಸವಕ್ಕೆ ಅನುದಾನ ನೀಡಬಾರದು ಎಂದು ನಾನು ಸರ್ಕಾರಕ್ಕೆ ಪತ್ರ ಬರೆಯಲಿದ್ದೇನೆ,” ಎಂದಿದ್ದಾರೆ. “ಹಿಂದಿನ ವರ್ಷದ ಉತ್ಸವದ ಲೆಕ್ಕಪತ್ರ ನೀಡದೇ ಮತ್ತೊಮ್ಮೆ ಅನುದಾನ ಬಿಡುಗಡೆ ಮಾಡಿದರೆ ಕಾನೂನಾತ್ಮಕ ಹೋರಾಟ ಕೈಗೊಳ್ಳುತ್ತೇನೆ. ಶಾಸಕರೇ ಲೆಕ್ಕಪತ್ರ ನೀಡಬೇಕು, ನಂತರವೇ ಉತ್ಸವ ನಡೆಯಬೇಕು,” ಎಂದಿದ್ದಾರೆ.
“ಸ್ವಾತಂತ್ರಕ್ಕಾಗಿ ಹೋರಾಡಿದ ರಾಣಿ ಚೆನ್ನಮ್ಮಳ ಹೆಸರಿನ ಉತ್ಸವದ ಹಣವನ್ನು ಅಧಿಕಾರಿಗಳು ದುರುಪಯೋಗ ಮಾಡುವುದು ನಾಚಿಕೇಡಿನ ವಿಷಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು
ಕಿತ್ತೂರು ಉತ್ಸವದ ಅನುದಾನ ಹಂಚಿಕೆಯಲ್ಲಿ ಪಾರದರ್ಶಕತೆ ಇರದಿರುವ ಕುರಿತು ಈಗ ಅಧಿಕಾರಿಗಳ ಸ್ಪಷ್ಟನೆ ಕೇಳಿಕೊಳ್ಳಲಾಗುತ್ತಿದೆ. ಈ ಕುರಿತು ಜಿಲ್ಲಾ ಆಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ