ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಇಲ್ಲಿನ ಬಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಚುನಾವಣೆಗೆ ನಾಮಪತ್ರ ಭರಾಟೆ ಜೋರಾಗಿದ್ದು, ಗುರುವಾರ ಹಾಲಿ, ಮಾಜಿ ಶಾಸಕರು ಸಹಿತ ವಿವಿಧ ಕ್ಷೇತ್ರದ ಅಭ್ಯರ್ಥಿಗಳಿಂದ ಒಟ್ಟು 29 ನಾಮಪತ್ರಗಳು ಸಲ್ಲಿಕೆಯಾಗಿವೆ.
ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕ ವಿಶ್ವಾಸ ವೈದ್ಯ(ಯರಗಟ್ಟಿ), ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ (ನಿಪ್ಪಾಣಿ), ವಿರೂಪಾಕ್ಷ ಮಾಮನಿ(ಸವದತ್ತಿ), ಅಪ್ಪಾಸಾಹೇಬ ಕುಲಗೋಡೆ(ರಾಯಬಾಗ), ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ(ಬೈಲಹೊಂಗಲ), ವಿಕ್ರಮ ಇನಾಮದಾರ(ಕಿತ್ತೂರು) ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ(ಖಾನಾಪುರ) ನಾಮಪತ್ರ ಸಲ್ಲಿಸಿದರು.
ಇದೇ ರೀತಿ ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳದೇ ರಾಮದುರ್ಗ ಕ್ಷೇತ್ರದಿಂದ ವಿಧಾನಸಭೆ ಮುಖ್ಯಸಚೇತಕ ಮತ್ತು ಕಾಂಗ್ರೆಸ್ ಶಾಸಕ ಅಶೋಕ ಪಟ್ಟಣ, ನಿಪ್ಪಾಣಿ ಕ್ಷೇತ್ರದಿಂದ ಉತ್ತಮ ಪಾಟೀಲ, ರಾಮದುರ್ಗ ಕ್ಷೇತ್ರದಿಂದ ಮುಖಂಡ ಮಲ್ಲಪ್ಪ ಯಾದವಾಡ ನಾಮಪತ್ರ ಸಲ್ಲಿಸಿದರು.
ಜಾರಕಿಹೊಳಿ ಬಣದಿಂದ ಒಟ್ಟು 13 ಕಡೆಗಳಲ್ಲಿ ಸ್ಪರ್ಧಿಸಲು ನಿರ್ಣಯಿಸಲಾಗಿದ್ದು, ಅ.11ರಂದು 6ಕ್ಷೇತ್ರಗಳಿಗೆ ಈ ಬಣದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ .