ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಮಯದಲ್ಲಿ ರೈಲು ಹಾಗೂ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿ ಆಗುವುದು ಬಹಳ ಸಾಮಾನ್ಯ. ಈ ಕಾರಣದಿಂದ ಜನ ದಟ್ಟಣೆಯನ್ನ ನಿಯಂತ್ರಿಸಲು ಹಾಗೂ ಜನರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಬೆಂಗಳೂರು- ಹುಬ್ಬಳ್ಳಿ ಹಾಗೂ ವಿಜಯಪುರ ನಡುವೆ ವಿಶೇಷ ರೈಲುಗಳನ್ನ ಬಿಡಲು ನೈಋತ್ಯ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ.
ಅ.17 ರಿಂದ ವಿಶೇಷ ರೈಲು ಸೇವೆ: ಸದ್ಯದ ಮಾಹಿತಿ ಪ್ರಕಾರ ಈ ವಿಶೇಷ ರೈಲು ಅಕ್ಟೋಬರ್ 17 ರಂದು ಹೊರಡಲಿದೆ. ಎಸ್‌ಎಸ್‌ಎಸ್ ಹುಬ್ಬಳ್ಳಿ -ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 17 ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 11 ಗಂಟೆಗೆ ಹೊರಡುತ್ತದೆ. ಇದೇ ರೈಲು ರಾತ್ರಿ 8 ಗಂಟೆಗೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಬರಲಿದೆ. ಈ ರೈಲು ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಹಾಗೂ ತುಮಕೂರಿನಲ್ಲಿ ಸ್ಟಾಪ್ ಕೊಡಲಿದೆ ಎನ್ನಲಾಗಿದೆ.
ಹಾಗೆಯೇ, ಎಸ್‌ಎಂವಿಟಿ ಬೆಂಗಳೂರು ಹಾಗೂ ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಅದೇ ದಿನ ಅಂದರೆ ಅಕ್ಟೋಬರ್ 17 ರಂದು ರಾತ್ರಿ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯಾಹ್ನ 2 ಗಂಟೆಗೆ ವಿಜಯಪುರಕ್ಕೆ ತಲುಪಲಿದೆ. ಇದೇ ರೈಲು ಅಕ್ಟೋಬರ್ 22 ರಂದು ವಿಜಯಪುರದಿಂದ ಸಂಜೆ 7 ಗೆ ಹೊರಡುತ್ತದೆ ಹಾಗೂ ಮಧ್ಯಾಹ್ನ 11.15 ಕ್ಕೆ ಬೆಂಗಳೂರಿಗೆ ತಲುಪಲಿದೆ.
ಇನ್ನು ಈ ಎರಡೂ ರೈಲುಗಳು ಮಾರ್ಗ ಮಧ್ಯದಲ್ಲಿ ತುಮಕೂರು. ಅರಸೀಕರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿಗಳಲ್ಲಿ ಸ್ಟಾಪ್ ಕೊಡಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ಟು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಕೇಂದ್ರ ಅಸ್ತು: ರಾಜ್ಯದ ಜನರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಿಹಿ ಸುದ್ದಿ ನೀಡಿದ್ದಾರೆ. ಕಳೆದ ಹಲವು ವರ್ಷಗಳಿಂದ ರಾಜ್ಯದ ಜನರು ಎದುರು ನೋಡುತ್ತಿದ್ದ ಸೂಪರ್ ಫಾಸ್ಟ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನಿಂದ ಮುಂಬೈಗೆ ಸೂಪರ್ ಫಾಸ್ಟ್ ರೈಲು ಘೋಷಣೆ ಮಾಡಿದ್ದರು.
ಈ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಂತಸ ಹಂಚಿಕೊಂಡಿದ್ದರು, ಕಳೆದ 30 ವರ್ಷಗಳಿಂದ ಕೇಂದ್ರ ಮುಂದೆ ಇದ್ದ ಬೇಡಿಕೆಗೆ ಈಗ ಮನ್ನಣೆ ಸಿಕ್ಕಿದೆ. ಆ ಮೂಲಕ ದೇಶದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾದ ಬೆಂಗಳೂರು ಮತ್ತು ಮುಂಬಯಿ ಜನರಿಗೆ ಸಂತಸ ತಂದಿದೆ ಎಂದಿದ್ದರು. ಈ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ, ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಧನ್ಯವಾದ ತಿಳಿಸಿದ್ದರು.