ಮೈಸೂರು: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು-ಕೊಡಗು ಸಂಸದ ಯದುವೀರ್ ವಾಗ್ದಾಳಿ ನಡೆಸಿ ಸರ್ಕಾರದ ವಿರುದ್ಧ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾಗಿದೆ. ಒಡೆಯರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ಆಡಳಿತ ಯಂತ್ರ ಜನಹಿತವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ. ಸಿಎಂ ತಮ್ಮ ತವರೂರಿನ ವಿಚಾರದಲ್ಲಿ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತಿದೆ ಎಂದು ಸಂಸದ ಯದುವೀರ್ ಒಡೆಯರ್ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮೈಸೂರಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಇದರಿಂದಾಗಿ ಪ್ರವಾಸೋದ್ಯಮದಲ್ಲಿ ವಿಶ್ವಮಟ್ಟದ ಖ್ಯಾತಿ ಹೊಂದಿರುವ ಮೈಸೂರಿನ ಹೆಸರು ಕೆಡುತ್ತಿದೆ. ಪೊಲೀಸರ ಬಗ್ಗೆ ಯಾರಿಗೂ ಭಯ ಇಲ್ಲದಂತಾಗಿದೆ. ಹೀಗಾಗಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಯದುವೀರ್ ಹೇಳಿದ್ದಾರೆ. ಇನ್ನು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ದಸರಾ ಪಾಸ್ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಂಸದ ಯದುವೀರ್, ದಸರಾ ಬರೀ ಅವ್ಯವಸ್ಥೆಯಲ್ಲಿ ನಡೆಯಿತು. ಪಾರದರ್ಶಕವಾಗಿ ದಸರಾ ಪಾಸ್ ನೀಡಿಲ್ಲ. ದಸರಾ ಪಾಸ್ ಬದಲು ಸಂಪೂರ್ಣ ಟಿಕೆಟ್ ಮಾಡಿ ಎಂದು ಹೇಳಿದ್ದೆವು. ಆದರೆ ಅದನ್ನು ಪರಿಗಣಿಸಲಿಲ್ಲ ಎಂದು ಹರಿಹಾಯ್ದರು.
ಜನರ ದಸರಾ ಆಗಬೇಕಿದ್ದ ಮೈಸೂರು ದಸರಾ ಪ್ರಭಾವಿಗಳ ದಸರಾ ಆಯ್ತು. ಕಾಂಗ್ರೆಸ್ ನ ಪ್ರಮುಖರು, ಅವರ ಮನೆಯವರಿಗೆ ದಸರಾ ಆಯ್ತು. ಕಾಂಗ್ರೆಸ್‌ನ ದರ್ಬಾರ್ ಆಗಿ ದಸರಾ ನಡೆಯಿತು ಅಂತ ದಸರಾ ಅವ್ಯವಸ್ಥೆ ಬಗ್ಗೆ ಯದುವೀರ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಸ್ಥಳೀಯ ಪ್ರಜಾಪ್ರಭುತ್ವವೇ ನಾಶವಾಗಿದೆ. ಮೈಸೂರು ಮಹಾನಗರ ಪಾಲಿಕೆ ಚುನಾವಣೆಯೂ ನಡೆದಿಲ್ಲ. ಚುನಾವಣೆ ನಡೆಸಲು ಮೀನಾ ಮೇಷ ಎಣಿಸಿದರೆ ಚುನಾವಣೆಗಾಗಿ ಬಿಜೆಪಿ ಹೋರಾಟ ನಡೆಸಬೇಕಾಗುತ್ತದೆ ಅಂತ ಸಂಸದ ಯದುವೀರ್ ಒಡೆಯರ್ ಮೈಸೂರಿನಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.