ಹಾಸನ: ವರ್ಷದಲ್ಲಿ ಕೇವಲ ಒಂದು ಭಾರಿ ಮಾತ್ರ ಭಕ್ತರಿಗೆ ದರ್ಶನ ನೀಡುವ ಪುರಾಣ ಪ್ರಸಿದ್ಧ ಶ್ರೀ ಹಾಸನಾಂಬೆ ದೇವಾಲಯ ಈ ಬಾರಿ ಅಕ್ಟೋಬರ್ 9ರಿಂದ ದರ್ಶನ ನೀಡಲು ಬಾಗಿಲು ತೆರೆದಿದ್ದು, ಮೊದಲ ದಿನಗಳಿಂದಲೇ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದೇವಿಯ ದರ್ಶನ ಪಡೆದು ದಾಖಲೆ ಸ್ಥಾಪಿಸಿದ್ದಾರೆ.
ದರ್ಶನದ ಆರಂಭದ ದಿನಗಳಲ್ಲಿ ಮಾತ್ರವೇ ಒಟ್ಟು ₹2.24 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಪ್ರತಿವರ್ಷದಂತೆ ಈ ಬಾರಿಯೂ ಭಕ್ತರ ದಂಡು ಹಾಸನದತ್ತ ಹರಿದು ಬರುತ್ತಿದ್ದು, ದೇವಿಯ ದರ್ಶನದ ಜೊತೆಗೆ ದೇವಸ್ಥಾನಕ್ಕೆ ಅತೀ ಹೆಚ್ಚು ಆದಾಯ ಸಂಗ್ರಹವಾಗುತ್ತಿದೆ. ವೀಕೆಂಡ್ ಹಿನ್ನೆಲೆ ಟಿಕೆಟ್ ಮಾರಾಟದಲ್ಲೂ ದಾಖಲೆ ಸೃಷ್ಟಿಯಾಗಿದೆ 300 ರೂ ಮೌಲ್ಯದ ಟಿಕೆಟ್‌ಗಳಿಂದ ಸುಮಾರು 27759 ಟಿಕೆಟ್ ಖಾಲಿಯಾಗಿದ್ದರೆ, ಒಂದು ಸಾವಿರ ರೂಪಾಯಿಯ 12396 ಟಿಕೆಟ್ ಮಾರಾಟವಾಗಿದೆ.
ಒಟ್ಟಾರೆಯಾಗಿ 22457400 ರೂ. ಸಂಗ್ರಹವಾಗಿದೆ. ಇನ್ನು 17337 ಲಡ್ಡು ಮಾರಾಟವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಇನ್ನು ಈ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆಯಿದ್ದು, ದೇವಾಲಯ ಬಾಗಿಲು ಹಾಕುವಷ್ಟರಲ್ಲಿ 30 ಲಕ್ಷ ಜನಕ್ಕೂ ಹೆಚ್ಚು ಜನ ದೇವಿಯ ದರ್ಶನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಆರಂಭದ ದಿನಗಳಿಂದಲೇ ಹಾಸನಾಂಬೆ ದರ್ಶನದಲ್ಲಿ ದಾಖಲೆ ಆದಾಯ ಬರುತ್ತಿದೆ. ನಿನ್ನೆ ಮಾತ್ರವೇ ₹67 ಲಕ್ಷ ಸಂಗ್ರಹವಾಯಿತು. ಕಳೆದ ವರ್ಷ ಒಟ್ಟು ₹12 ಕೋಟಿ ಆದಾಯ ದಾಖಲಾಗಿತ್ತು. ಈ ವರ್ಷ ಅದು ₹15 ಕೋಟಿಗೂ ಹೆಚ್ಚು ಆಗುವ ನಿರೀಕ್ಷೆಯಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಇದುವರೆಗೆ 91 ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ — ಕಳೆದ ಐದು-ಆರು ವರ್ಷಗಳಿಗಿಂತ ಇದು ಸ್ಪಷ್ಟ ದಾಖಲೆ. ಯಾವುದೇ ಗೊಂದಲವಿಲ್ಲದೆ, ಶಿಸ್ತುಬದ್ಧವಾಗಿ ದರ್ಶನ ಕಾರ್ಯ ನಡೆಯುತ್ತಿದೆ. ಪ್ರತಿದಿನ ಕನಿಷ್ಠ 2 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಎಲ್ಲರೂ ಅಕ್ಟೋಬರ್ 18ರೊಳಗೆ ದರ್ಶನ ಮುಗಿಸಿಕೊಳ್ಳಬೇಕು. ಅಕ್ಟೋಬರ್ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವಿಯ ದರ್ಶನಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.