ಬೆಂಗಳೂರು: ಶವದ ಮೇಲಿನ ಚಿನ್ನಾಭರಣ ಕದ್ದಿರುವ ಆರೋಪದ ಮೇಲೆ ಆಂಬುಲೆನ್ಸ್ ಸಿಬ್ಬಂದಿಯ ಮೇಲೆ ಮೃತ ಮಹಿಳೆಯ ಪತಿ ದೂರು ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 4.90 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬೆಂಗಳೂರು ನಿವಾಸಿ ಸಗಾಯ್ ರಾಜ್ ಅವರ ಪತ್ನಿ ಜ್ಞಾನ ಅವರು ಅನಾರೋಗ್ಯದಿಂದಾಗಿ ಹಠಾತ್ತಾನೆ ಕುಸಿದು ಬಿದ್ದ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜ್ಞಾನ ಅವರು ಜೀವ ಕಳೆದುಕೊಂಡಿದ್ದು, ನಂತರ ಸ್ವಾಭಾವಿಕ ಸಾವು ಎಂದು ವೈದ್ಯರು ಘೋಷಿಸಿ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಿದ್ದರು.
ಬಳಿಕ ಶವ ಸಾಗಿಸುವ ಸಲುವಾಗಿ ಆ್ಯಂಬುಲೆನ್ಸ್ ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ. ರಾಜು ಎಂಬುವವರು ಸಂತೋಷ್ ಎಂಬಾತನ ನಂಬರ್ ಕೊಟ್ಟು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ವಾಹನದ ಮಾಲಿಕರಾದ ಸಂತೋಷ್ ಆ್ಯಂಬುಲೆನ್ಸ್ ಜೊತೆಗೆ ಹುಸೇನ್ ಹಾಗು ಮೊಹಿನ್ ಎಂಬ ಇಬ್ಬರು ಸಿಬ್ಬಂದಿಯನ್ನು ಕಳಿಸಿಕೊಟ್ಟಿದ್ದರು.
ನಂತರ ಶವವನ್ನ ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ಯುವಾಗ ಟಯರ್ ಪಂಕ್ಚರ್ ಆಗಿದೆ ಎಂದು ನೆಪ ಹೇಳಿ ಹುಸೇನ್ ಮತ್ತು ಮೊಹೀನ್ ಕುಟುಂಬಸ್ಥರಿಂದ ಸ್ವಲ್ಪ ದೂರ ಅಂತರ ಕಾಯ್ದುಕೊಂಡಿದ್ದರು. ನಂತರ ಮನೆಗೆ ಬಂದು ಶವ ಇಳಿಸಿ ಆ್ಯಂಬುಲೆನ್ಸ್ ಸಿಬ್ಬಂದಿಗೆ ಸಗಾಯ್ ರಾಜ್ ಹಣ ನೀಡಿ ಕಳಿಸಿದ್ದರು. ಅವರು ಹೋದ ಬಳಿಕ ಪರೀಕ್ಷಿಸಿದಾಗ ಶವದ ಮೈಮೇಲೆ ಮಾಂಗಲ್ಯ ಸರ ಬಿಟ್ಟು ಉಳಿದ ಆಭರಣ ಕಳುವಾಗಿರುವುದು ಬೆಳಕಿಗೆ ಬಂದಿತ್ತು.
ಪಂಕ್ಚರ್ ಹಾಕುವ ವೇಳೆ ಚಿನ್ನಾಭರಣ ಕದ್ದಿರುವ ಸಾಧ್ಯತೆಯಿದೆ ಎಂದು ಸಗಾಯ್ ರಾಜ್ ಅವರಿಗೆ ಅರಿವಾಗಿತ್ತು. ಹೀಗಾಘಿ ಆ್ಯಂಬುಲೆನ್ಸ್ ಸಿಬ್ಬಂದಿಗಳೇ ಚಿನ್ನವನ್ನು ಕದ್ದಿದ್ದಾರೆ. ಶವವನ್ನು ಫ್ರೀಝ್ ನಲ್ಲಿಟ್ಟಾಗ ಇದ್ದ ಚಿನ್ನ ಮನೆಗೆ ಬಂದಾಗ ಇರಲಿಲ್ಲ. ಸಂಬಂಧಿಕರು ದುಖಃದಲ್ಲಿದ್ದಾಗ ಕಳ್ಳತನದ ಕೃತ್ಯವೆಸಗಲಾಗಿದೆ ಎಂದು ಆರೋಪಿಸಿ ಸಗಾಯ್ ರಾಜ್ ಆ್ಯಂಬುಲೆನ್ಸ್ ಸಿಬ್ಬಂದಿಗಳಾದ ಹುಸೇನ್ ,ಮೋಹಿನ್ ಎಂಬುವವರ ವಿರುದ್ದ ದೂರು ದಾಖಲಿಸಿದ್ದಾರೆ.