ವಿಜಯಪುರ: ನಗುವಿನ ನಶೆಯಲ್ಲಿ ತೇಲಿಸಿ, ನಮ್ಮನ್ನು ನಕ್ಕು ನಗಿಸುತ್ತಿದ್ದ ಕಲಿಯುಗದ ಕುಡುಕ ಎಂದೇ ಖ್ಯಾತಿ ಗಳಿಸಿದ್ದ ವಿಜಯಪುರದ ರಾಜು ತಾಳಿಕೋಟೆ ಮಿಂಚಿ ಮರೆಯಾಗಿದ್ದಾರೆ. ನಿನ್ನ ಹಠಾತ್ತನೆ ಸಂಭವಿಸಿದ ಹೃದಯಾಘಾತದಿಂದ ಸಾವನಪ್ಪಿದ್ದು, ಇಡೀ ಹಾಸ್ಯ ರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಇಡೀ ಚಿತ್ರರಂಗ ಸೇರಿ, ವೃತ್ತಿ ರಂಗ ಭೂಮಿ ಇವರಿಗೆ ಅಂತಿಮ ನಮನ ಸಲ್ಲಿಸಲಾಯಿತು.
ರಂಗನಾಯಕ ಡಾ. ರಾಜು ತಾಳಿಕೋಟೆ ಇನ್ನಿಲ್ಲ ಎಂಬುದು ಇಡೀ ನಾಟಕರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಕಲಿಯುಗದ ಕುಡುಕನೇ ಎಂದೇ ಖ್ಯಾತಿಗಳಿಸಿದ್ದ ಹಿರಿಯ ನಟ, ನಿರ್ದೇಶಕ ಡಾ. ರಾಜು ತಾಳಿಕೋಟೆ ಬದುಕಿನ ನಾಟಕಕ್ಕೆ ವಿದಾಯ ಹೇಳಿದ್ದಾರೆ.
ನಿನ್ನೆ ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿ ಸಂಜೆ ವಿಶ್ರಾಂತಿ ಪಡೆಯುವ ವೇಳೆ ಹಠತ್ ಹೃದಯಾಘಾತ ಸಂಭವಿಸಿ ಕೊನೆ ಉಸಿರೆಳೆದಿದ್ದಾರೆ.
ರಾಜು ತಾಳಿಕೋಟೆ ಜೀವನವೇ ಒಂದು ಅಚ್ಚರಿಯ ಬದುಕು. ಬಹಳ ಸರಳ ಸಹಜವಾಗಿ ಬದುಕಿದ್ದ ರಾಜುಕೋಟೆಯ ನಿಜ ನಾಮ ರಾಜೇಸಾಬ್ ಮುಕ್ತಂ ಸಾಬ್ ಯಂಕಂಚಿ. ಮುಕ್ತಂ ಮತ್ತು ಮೆಹಬೂಬ್ ದಂಪತಿಯ ಪುತ್ರ. ಇಸ್ಲಾಂ ಧರ್ಮದವರಾದರೂ, ರಾಜು ಎಂದೇ ಪ್ರಖ್ಯಾತಿ ಪಡೆದಿದ್ದರು. ಇದೀಗ ಇಬ್ಬರು ಪತ್ನಿಯರು, ಐವರು ಮಕ್ಕಳನ್ನು ತ್ಯಜಿಸಿ ಹೊರಟಿದ್ದಾರೆ.
ಹಾಸ್ಯನಟ, ರಂಗಾಯಣ ನಿರ್ದೆಶಕ ರಾಜು ತಾಳಿಕೋಟೆಯ ಪಾರ್ಥಿವ ಶರೀರವನ್ನು ಧಾರವಾಡ ರಂಗಾಯಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾಜು ತಾಳಿಕೋಟೆ ಅಂತಿಮ ದರ್ಶನವನ್ನು ಧಾರವಾಡ ಜಿಲ್ಲಾಧಿಕಾರಿ, ಸಿಇಓ ಸೇರಿ ಅನೇಕ ಕಲಾವಿದರು ಅಂತಿಮ ದರ್ಶನ ಪಡೆದುಕೊಂಡರು. ಇನ್ನು ಪಾರ್ಥಿವ ಶರೀರದ ಎದುರು ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಬಿಕ್ಕಿ ಬಿಕ್ಕಿ ಕಣ್ಣಿರು ಹಾಕಿದರು.
ತಾಳಿಕೋಟೆಯ ಧಾರವಾಡದಿಂದ ವಿಜಯಪುರಕ್ಕೆ ಕೊಂಡೋಯ್ದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿರುವ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆ ವೇಳೆ ಮೃತ ಕುಟುಂಬಸ್ಥರ ಕಣ್ಣೀರು ಮುಗಿಲು ಮುಟ್ಟಿತ್ತು.
ಒಟ್ಟಾರೆ ಇಡೀ ಕನ್ನಡ ಚಿತ್ರರಂಗವನ್ನು ಮತ್ತು ರಂಗಭೂಮಿಯನ್ನು ನಗುವಿನ ನಶೆಯಲ್ಲಿ ತೇಲಿಸುತ್ತಿದ್ದ ರಾಜೂ ತಾಳಿಕೋಟೆಯ ಸಾವು ನಿಜಕ್ಕೂ ಬರಸಿಡಿಲು ಬಡಿದಂತಾಗಿದೆ. ರಂಗಭೂಮಿಗೆ ಇವರ ಸಾವು ತುಂಬಲಾರದ ನಷ್ಟವಾಗಿದೆ.