ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯತಿ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ 40 ಮಂದಿ ಫಲಾನುಭವಿಗಳಿಗೆ ಮನೆಗಳ ಮಂಜೂರಾತಿ ಆದೇಶ ಪತ್ರವನ್ನು ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್ ವಿತರಣೆ ಮಾಡಿದರು.
ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿ ಕಚೇರಿಯ ದಿವಂಗತ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಟಿ-5, ಎಸ್ಸಿ, 9 ಹಾಗು ಇತರೆ ಸಮುದಾಯದ 26 ಮಂದಿ ಸೇರಿದಂತೆ ಒಟ್ಟು 40 ಫಲಾನುಭವಿಗಳಿಗೆ ಮನೆಗಳ ಮಂಜೂರಾತಿ ಆದೇಶ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್, ನರೇಗಾದಡಿ ಹೆಚ್ಚುವರಿಯಾಗಿ ಗ್ರಾಮ ಪಂಚಾಯಿತಿಗೆ 25 ಸಾವಿರ ಹಣ ದೊರೆಯುತ್ತಿದೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ 1 ಲಕ್ಷ 75 ಸಾವಿರ ರೂ. ಹಣ, ಜೊತೆಗೆ 28 ಸಾವಿರ ಪ್ರೋತ್ಸಾಹ ಧನ ಸಿಗುತ್ತಿದೆ. ಇದು ಮೂರು ಹಂತದಲ್ಲಿ ಹಣ ಬಿಡುಗಡೆಯಾಗಲಿದ್ದು, ಫಲಾನುಭವಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷನಾಗಿ ಅಧಿಕಾರಿ ವಹಿಸಿಕೊಂಡು ಆ.2ಕ್ಕೆ 30 ತಿಂಗಳು ತುಂಬಲಿದೆ. ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನವೀಕರಣ, ಎಲ್ಲಾ ಬೀದಿಗಳಿಗೆ ಎಲ್‍ಇಡಿ ದೀಪಗಳ ಅಳವಡಿಕೆ, ಯಶಸ್ವಿ ಕೋವಿಡ್-19 ನಿಯಂತ್ರಣ, ಘನ ತ್ಯಾಜ್ಯ ವಿಲೇವಾರಿಗೆ ವಾಹನ ಖರೀದಿ, ನರೇಗಾದಡಿ ಕಾರ್ಮಿಕರಿಗೆ ಕೂಲಿ ಕೆಲಸ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆ ಕಟ್ಟೆಗಳ ಪುನಶ್ಚೇತನ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಕ್ರಮ, ಶಿಥಿಲಾವಸ್ಥೆಯಲ್ಲಿದ್ದ ಓವರ್ ಹೆಡ್ ಟ್ಯಾಂಕ್ ಹಾಗೂ ಬಸ್ ನಿಲ್ದಾಣ ದುರಸ್ತಿ, ಡಿಜಿಟಲ್ ಗ್ರಂಥಾಲಯ ನಿರ್ಮಾಣ, ನೆನೆಗುದಿಗೆ ಬಿದ್ದಿದ್ದ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ, ಅರ್ಜಿ ಸಲ್ಲಿಸಿದ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಭೀಮನಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೀಮನಬೀಡು ಮತ್ತು ಹುಲಸಗುಂದಿ ಗ್ರಾಮದ 1450 ಮನೆಗಳಿಗೆ ಒಣ ಕಸ ಮತ್ತು ಹಸಿ ಕಸ ಸಂಗ್ರಹಣೆ ಮಾಡಲು 2 ಪ್ಲಾಸ್ಟಿಕ್ ಬುಟ್ಟಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ನಲಿ-ಕಲಿ ಯೋಜನೆಯಡಿ 522 ಮಕ್ಕಳಿಗೆ ಕುಳಿತುಕೊಳ್ಳಲು ಚೇರ್, ಟೇಬಲ್, ಡೆಸ್ಕ್ ವಿತರಣೆ, ಗ್ರಂಥಾಲಯಕ್ಕೆ ಪೀಠೋಪಕರಣ ಖರೀದಿ, ಉಪ ಆರೋಗ್ಯ ಕೇಂದ್ರ ದುರಸ್ತಿ, ಪೀಠೋಪಕರಣಗಳು ಖರೀದಿ, ಸರ್ಕಾರಿ ಶಾಲೆ ಕಟ್ಟಡ ದುರಸ್ತಿ, ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ, ಉಪ ಆರೋಗ್ಯ ಕೇಂದ್ರದ ಆವರಣದಲ್ಲಿ ಅಂಗವಿಕಲರಿಗಾಗಿ ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಜಿ.ಸ್ವಾಮಿ, ಸಿದ್ದಶೆಟ್ಟಿ, ರಮೇಶ್, ಮಣಿಕಂಠ, ಲೆಕ್ಕ ಸಹಾಯಕ ಮಹದೇವೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.