ಹಾಸನ: ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಯಾವುದೇ ವೇಳೆಯಲ್ಲಾದರೂ ಡ್ಯಾಂನಿಂದ ನದಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇಂದು ಬೆಳಿಗ್ಗೆ 6 ಗಂಟೆಯ ವೇಳೆಗೆ ಜಲಾಶಯಕ್ಕೆ 16,394 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 4,600 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಸದ್ಯ ಜಲಾಶಯದಲ್ಲಿ 2,921.50 ಅಡಿ ಮಟ್ಟದ ನೀರು ಸಂಗ್ರಹವಾಗಿದ್ದು, ಗರಿಷ್ಠ ಮಟ್ಟ 2,922 ಅಡಿಗಳಾಗಿದೆ.
ಹವಾಮಾನ ಇಲಾಖೆ ಅಕ್ಟೋಬರ್ 29 ರವರೆಗೆ ಮಳೆಯ ಮುನ್ಸೂಚನೆ ನೀಡಿರುವುದರಿಂದ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ನದಿ ಪಾತ್ರದ ಗ್ರಾಮಸ್ಥರು ಹಾಗೂ ನದಿಯ ದಂಡೆಯ ಬಳಿ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಕಂದಾಯ ಇಲಾಖೆ ಹಾಗೂ ತಹಸೀಲ್ದಾರ್ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಹೇಮಾವತಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಜ್ಯೋತಿ ಆದೇಶಿಸಿದ್ದಾರೆ.



