ರಾಮನಗರ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (ರಾಷ್ಟ್ರೀಯ ಹೆದ್ದಾರಿ– 275) ದ್ವಿಚಕ್ರ ವಾಹನ, ಆಟೊ, ಕೃಷಿ ವಾಹನಗಳು ಸೇರಿದಂತೆ ವಿವಿಧ ಬಗೆಯ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇರಿರುವ ನಿಷೇಧವು ಸೋಮವಾರದಿಂದ (ಜುಲೈ 31)ಜಾರಿಗೆ ಬಂದಿದೆ.
ನಿಯಮ ಮೀರಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸವಾರರು ರಸ್ತೆಗಿಳಿದರೆ ಪೊಲೀಸರು ₹500 ದಂಡ ವಿಧಿಸಲಿದ್ದಾರೆ. ಮೋಟಾರು ವಾಹನ ಕಾಯ್ದೆಯ ಅನ್ವಯ ಪ್ರಾಧಿಕಾರವು ಜುಲೈ 12ರಂದು ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಅದರಂತೆ, ಜಾರಿಗೆ ಬರುವ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಜಾಗೃತಿ: ನಿಷೇಧ ಕುರಿತು ವಾಹನಗಳ ಸವಾರರಿಗೆ ಜಾಗೃತಿ ಮೂಡಿಸಲು ಟೋಲ್ ಸಂಗ್ರಹ ಕೇಂದ್ರಗಳು, ಹೆದ್ದಾರಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಡಿಜಿಟಲ್ ಡಿಸ್‌ಪ್ಲೆ ಬೋರ್ಡ್‌ಗಳಲ್ಲೂ ನಿಷೇಧ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.
ಪೊಲೀಸರ ಸಹಯೋಗದಲ್ಲಿ ನಿಷೇಧ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ. ಮೊದಲ ದಿನ ಸಾರ್ವಜನಿಕರು ಹಾಗೂ ವಾಹನಗಳ ಸವಾರರು ಗಲಾಟೆ ಮಾಡುವ ಸಾಧ್ಯತೆ ಇರುವುದರಿಂದ ಮೊದಲ ದಿನ ಪ್ರಾಧಿಕಾರಿದ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪೊಲೀಸರು ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಿಷೇಧದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಹೆಚ್ಚುವರಿ ಸಿಬ್ಬಂದಿ: ‘ನಿಯಮ ಜಾರಿಗೆ ಪ್ರಾಧಿಕಾರದವರು ಸಹಕಾರ ಕೋರಿರುವುದರಿಂದ ಜಿಲ್ಲೆಯ ವ್ಯಾಪ್ತಿಗೆ ಬರುವ ಹೆದ್ದಾರಿಯ ಎಲ್ಲಾ ಪ್ರವೇಶ– ನಿರ್ಗಮನ ಹಾಗೂ ಟೋಲ್ ಸಂಗ್ರಹ ಕೇಂದ್ರಗಳ ಬಳಿಯೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.
‘ವಾಹನಗಳ ಸವಾರರು ಅನಗತ್ಯವಾಗಿ ಎಕ್ಸ್‌ಪ್ರೆಸ್ ವೇಗೆ ಬಾರದೆ, ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ಮೂಲಕ ನಿಯಮ ಪಾಲಿಸಬೇಕು. ಆದಾಗ್ಯೂ ಯಾರಾದರೂ ಬಂದ ನಮ್ಮ ಸಿಬ್ಬಂದಿ ದಂಡದ ಬಿಸಿ ಮುಟ್ಟಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.
ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಮುಕ್ತವಾದಾಗಲೇ ಬೈಕ್, ಆಟೊ ಹಾಗೂ ಕೃಷಿಗೆ ಬಳಸುವ ವಾಹನಗಳ ಸಂಚಾರವನ್ನು ನಿಷೇಧಿಸಬೇಕು ಎಂಬು ಮಾತು ಕೇಳಿ ಬಂದಿತ್ತು. ಈ ಕುರಿತು, ಪ್ರಾಧಿಕಾರ ಪ್ರಸ್ತಾವ ಸಿದ್ದಪಡಿಸಿ ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಕಳಿಸಿ ಕೊಟ್ಟಿತ್ತು.
ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿದ್ದರಿಂದ ವಿಷಯ ತಣ್ಣಗಾಗಿತ್ತು. ಯಾವಾಗ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಯಿತೊ ಆಗ ಪ್ರಸ್ತಾವದ ಕುರಿತ ಚರ್ಚೆ ಮುನ್ನೆಲೆಗೆ ಬಂದಿತ್ತು. ಉನ್ನತ ಮಟ್ಟದ ಅಧಿಕಾರಿಗಳ ಹಂತದಲ್ಲಿ ಪರಿಶೀಲನೆ ನಡೆಸಿ ನಿಷೇಧಕ್ಕೆ ತೀರ್ಮಾನಿಸಿ, ಗೆಜೆಟ್ ಅಧಿಸೂಚನೆ ಕೂಡ ಹೊರಡಿಸಲಾಯಿತು.
ಪ್ರಾಧಿಕಾರ ನಿಷೇಧ ತೀರ್ಮಾನ ಕುರಿತು ದ್ವಿಚಕ್ರ, ತ್ರಿಚಕ್ರ, ಕೃಷಿ ಬಳಕೆಯ ವಾಹನಗಳ ಸವಾರರು ಹಾಗೂ ಸಾರ್ವಜನಿಕರಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿಷೇಧಕ್ಕೆ ಹೇಗೆ ಜನ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.