ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಜಿ.ಎಸ್.ಎಸ್ ಮಾಧ್ಯಮ ಸಂಸ್ಥೆ , ಆಯುಷ್ ಇಲಾಖೆ ಮೈಸೂರು , ಜಿ. ಎಸ್.ಎಸ್. ಯೋಗ ರಿಸರ್ಚ್ ಫೌಂಡೇಷನ್, ಮೈಸೂರು ಜಿಮ್ ಅಸೋಸಿಯೇಷನ್, ಪ್ರತಿನಿಧಿ ಪ್ರಾದೇಶಿಕ ದಿನಪತ್ರಿಕೆ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ” ಫಿಟ್ ಮೈಸೂರು-ಹರ್ಬಲ್ ಜಾಗೃತಿ ವಾಕ್ ಥಾನ್” ನಡೆಸಲಾಯಿತು.
ನಗರದ ಸರಸ್ವತಿಪುರಂ ನಲ್ಲಿರುವ ಕುಕ್ಕರಹಳ್ಳಿ ಕೆರೆ ದಂಡೆಯ ಕುವೆಂಪು ಉದ್ಯಾನವನ ಹಾಗೂ ಕೆರೆ ಸುತ್ತಲಿನ ಸುಮಾರು 3 ಕಿಲೊಮೀಟರ್ ನಡಿಗೆ ಮಾಡುವ ವಾಯು ವಿಹಾರಿಗಳಲ್ಲಿ ವಾಕಿಂಗ್ ಮಾಡುವುದರಿಂದಾಗುವ ಅನುಕೂಲತೆಗಳ ಬಗ್ಗೆ ತಿಳಿಸಿಕೊಡಲಾಯಿತು.
ಇದೇ ಸಂದರ್ಭ ಮೈಸೂರಿನ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಅವರ ನೇತ್ರತ್ವದಲ್ಲಿ, ಡಾ. ಮಂಜು ಪ್ರಸಾದ್, ಡಾ. ಆದಿತ್ಯ ಕಶ್ಯಪ್, ಡಾ. ಧನುಷ್ , ಡಾ.ಇರ್ಫಾನ್ ಲೇಪಾಕ್ಷಿ ಸೇರಿದಂತೆ ಏಳು ಜನ ಆಯುರ್ವೇದ ವೈದ್ಯರ ತಂಡವು ವಿಹಾರಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಅವರಿಗೆ ಉದ್ಯಾನವನದ ಆವರಣ ಹಾಗೂ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿರುವ 250 ಹೆಚ್ಚು ಅಪರೂಪ ಹಾಗೂ ಅತ್ಯಮೂಲ್ಯವಾದ ಆಯುರ್ವೇದ ಔಷಧಿ ಗುಣವುಳ್ಳ ಗಿಡ, ಮರ, ಬಳ್ಳಿಗಳ ತೊಗಟೆ, ಎಲೆ,ಹೂ, ಹಣ್ಣು ಬಗ್ಗೆ ವೈಜ್ಞಾನಿಕ ವಿವರಣೆಯನ್ನು ನೀಡಿ, ಅವುಗಳ ಕಾಂಡ, ಎಲೆ, ಹೂವಿನಿಂದ ರಸ ತಯಾರಿಸಿ ನಾವುಗಳು ಹೇಗೆ ಸೇವಿಸಿ ವಿವಿಧ ರೋಗಗಳಿಂದ ರಕ್ಷಿಸಿಕೊಳ್ಳುವುದರೊಂದಿಗೆ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ವಿವರಿಸಿದರು.
ಮೈಸೂರು ಜಿಮ್ ಅಸೋಸಿಯೇಷನ್ ನ ಹರ್ಷ ಮಾತನಾಡಿ, ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಮೈಸೂರಿನಲ್ಲಿ ಬೃಹತ್ ವಾಕ್ ಥಾನ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸುಮಾರು ಹತ್ತು ಸಾವಿರ ಜನರನ್ನು ಒಂದೆಡೆ ಸೇರಿಸಿ, ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮನಡೆಸಲಾಗುತ್ತದೆ ಎಂದರು .
ಜಿ.ಎಸ್.ಎಸ್ ಮಾಧ್ಯಮ ಸಂಸ್ಥೆ ಮುಖ್ಯಸ್ಥೆ ಹಾಗೂ ” ಫಿಟ್ ಮೈಸೂರು” ಸಂಚಾಲಕಿ ರೂಪ ಮಾತನಾಡಿ, ಬೃಹತ್ ವಾಕಥಾನ್ ಆಯೋಜನೆಗೊಂಡಿರುವ ನಿಟ್ಟಿನಲ್ಲಿ ವಾರಕ್ಕೊಂದು ವಾಕ್ ಥಾನ್ ಕಾರ್ಯಕ್ರಮಗಳ ಮೂಲಕ ಸಂಘಟಿಸಲಾಗುತ್ತಿದೆ, ಪ್ರತಿ ವಾರವೂ ಮೈಸೂರಿನ ವಿವಿಧ ಸಂಘಟನೆಗಳು ಬಂದು ಕೈಜೋಡಿಸಿವೆ , ಮುಂದಿನ ಭಾನುವಾರಗಳಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಬೆಳಗಿನ ನಡಿಗೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ತರಬೇತುದಾರರು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.



