ಮೈಸೂರು: ಬಸವಣ್ಣನ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಗೂ ಪುರುಷರಷ್ಟೇ ಸಮಾನ ಸ್ಥಾನಮಾನ ನೀಡಲಾಗಿತ್ತು. ಆದರೆ, ಇಂದಿನ ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಹಿಳೆಗೆ ಪುರುಷನಷ್ಟೇ ಸಮಾನ ಅವಕಾಶಗಳಿಲ್ಲ ಎಂದು ಮಾಜಿ ಸಚಿವ ಎಸ್.ಎಸ್.ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ಸಮಿತಿ ವತಿಯಿಂದ ನಗರದ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಬಸವ ತತ್ವ ಸಂದೇಶ ಪ್ರಸ್ತುತ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಪ್ರಜಾಪ್ರಭುತ್ವದಲ್ಲಿ ಜಾತಿ, ಮೌಢ್ಯ, ಕಂದಾಚಾರಗಳ ಕಾರಣದಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ಹಾದಿಯಾಗಿ ಹಲವಾರು ದೇವಸ್ಥಾನಗಳಿಗೆ ಪ್ರವೇಶ ನೀಡಲು ಹಿಂದೇಟು ಹಾಕಲಾಗುತ್ತಿದೆ. ಇಂತಹ ಮೂರ್ಖರ ನಡುವೆ ನಾವು ಬದುಕಿದ್ದೇವೆ. ಅಲ್ಲದೇ ಈ ಅಸಮಾನತೆಯನ್ನು ಖಂಡಿಸುವಲ್ಲಿ ಮಹಿಳೆಯರೂ ಹಿಂದೇಟು ಹಾಕುತ್ತಾರೆ. ಇತ್ತೀಚೆಗೆ ಚಾಮರಾಜನಗರದ ಹಳ್ಳಿಯೊಂದರಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದ ಸುದ್ದಿಯನ್ನು ದಿನಪ್ರತಿಕೆಗಳಲ್ಲಿ ಓದಿ ಆಶ್ಚರ್ಯವಾಯಿತು ಎಂದು ಹೇಳಿದರು.
ಇಂಗ್ಲೆಂಡಿನ ಪಾರ್ಲಿಮೆಂಟ್ ಮೇಲೆ ಬಸವನಣ್ಣ ಅನುಭವ ಮಂಟಪ ಬೀರಿದಷ್ಟು ಪ್ರಭಾವ ನಮ್ಮ ದೇಶದ ಪಾರ್ಲಿಮೆಂಟ್ ಮೇಲೆ ಬೀರಿಲ್ಲ. ೨೦೦೯ ರಿಂದ ೨೦೧೯ರ ಅವಧಿಯಲ್ಲಿ ಇದ್ದ ಇಂಗ್ಲೆಂಡಿನ ಸ್ಪೀಕರ್ ಜಾನ್ ಸೈಮಾನ್ ಹೇಳಿದಂತೆ, ಭಾರತದ ಬಸವಣ್ಣ ಒಬ್ಬ ಯುವ ಪ್ರವರ್ತ. ಇಂಗ್ಲೆಂಡಿನಲ್ಲಿ ಮ್ಯಾಗ್ನಕಾರ್ಟ್ ಘೋಷಣೆಗೂ ಹಾಗೂ ಅಮೇರಿಕಾದ ಮಾರ್ಟಿನ್ ಲೂಥರ್‌ಗೂ ಮೊದಲೇ ಅನುಭವ ಮಂಟಪ್ಪ ನಿರ್ಮಿಸಿ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಲ್ಲದೇ ಇತ್ತೀಚೆಗೆ ನಡೆದ ನೂತನ ಸಂಸತ್ ಭವನದ ಉದ್ಘಾಟನೆ ವೇಳೆಯೂ ನರೇಂದ್ರ ಮೋದಿ ಹಾಗೂ ಸಚಿವ ಪಿಯೂಸ್ ಗೋಯಲ್ ಕೂಡ ಬಸನವಣ್ಣನ ಅನುಭವ ಮಂಟಪವೇ ಪ್ರಪಂಚದ ಮೊದಲ ಪಾರ್ಲಿಮೆಂಟ್ ಎಂದು ಹೇಳಿದ್ದಾರೆ ಎಂದರು.
ಬಸವಣ್ಣ ಮೇಲ್ಜಾತಿಯಲ್ಲಿ ಜನಿಸಿದರೂ ಕೆಳಜಾತಿಯ ಜನರನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಿದರು. ನಾನೊಬ್ಬ ಮಾದಾರ ಚನ್ನಯ್ಯನ ಮಗ ಎಂದು ನಿರ್ಭೀತಿಯಿಂದ ಹೇಳಿದರು. ಆದರೆ, ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ನಿಂತಿಲ್ಲ. ಇದನ್ನು ತಡೆಯಲು ಹಲವಾರು ಕಾನೂನುಗಳಿದ್ದರೂ ಏನೂ ಪ್ರಯೋಜನವಾಗಿಲ್ಲ. ಭ್ರಷ್ಟಾಚಾರದಲ್ಲಿಯೂ ದೇಶ ಸಾಕಷ್ಟು ಮುಂದಿದೆ. ಅಸೆಂಬ್ಲಿಯಲ್ಲಿ ಎಲ್ಲಾ ಪಕ್ಷದ ನಾಯಕರು ಭಷ್ಟಾಚಾರ ಮಾಡಿದ್ದರೂ, ಅದನ್ನು ಸಾಬೀತು ಮಾಡಿದರೆ ರಾಜೀನಾಮೆ ನೀಡುವುದಾಗಿ ಎಲ್ಲಾ ನಾಯಕರೂ ಸವಾಲು ಹಾಕುತ್ತಾರೆ. ಅಲ್ಲದೇ ಧರ್ಮಸ್ಥಳಕ್ಕೂ ಹೋಗಿ ಆಣೆ ಮಾಡುವುದಕ್ಕೂ ಮುಂದಾಗಿದ್ದನ್ನು ಈ ದೇಶವೇ ನೋಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಷತ್ತಿನ ಗದಗ ಜಿಲ್ಲಾಧಕ್ಷ ವೀರನಗೌಡ ಮರಿಗೌಡ, ಮ.ಗು.ಸದಾನಂದಯ್ಯ, ವಿಶ್ರಾಂತ ಅಧ್ಯಾಪಕ ದೇವಣ್ಣ ಹೊಸಕೋಟೆ, ಹೆಚ್.ಈ.ಕೃಷ್ಣಪ್ಪ, ಡಾ.ಚಂದ್ರಶೇಖರಯ್ಯ, ಡಾ.ವಂದನಾ ರಮೇಶ್, ಜಿ.ರಂಗನಗೌಡ ಹಾಗೂ ಇತರರರು ಇದ್ದರು.