ಅಮರಾವತಿ : ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಮೊಂಥಾ ಚಂಡಮಾರುತ ರೂಪದಲ್ಲಿ ಆಂಧ್ರಪ್ರದೇಶಕ್ಕೆ ಅಪ್ಪಳಿಸಿದೆ. ಕಾಕಿನಾಡ ಕರಾವಳಿಯಲ್ಲಿ ಅಬ್ಬರಿಸ್ತಿರುವ ಸೈಕ್ಲೋನ್ ವೇಗ 90-100 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ.
ರಾತ್ರಿ ವೇಳೆಗೆ ಮೊಂಥಾ ಚಂಡಮಾರುತ ಆಂಧ್ರ ಕರಾವಳಿಯಲ್ಲಿ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಕಾಕಿನಾಡದ ಸುತ್ತಮುತ್ತಲಿನ ಭೂಕುಸಿತ ಉಂಟುಮಾಡುವ ಸಾಧ್ಯತೆಯೂ ಇದೆ. ನೆಲ್ಲೂರಿನಿಂದ ಶ್ರೀಕಾಕುಳಂವರೆಗಿನ ಆಂಧ್ರಪ್ರದೇಶದ ಕರಾವಳಿಯಲ್ಲಿ 2 ರಿಂದ 4.7 ಮೀ. ಎತ್ತರದ ಸಮುದ್ರ ಅಲೆಗಳು ಏಳಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
1,419 ಹಳ್ಳಿಗಳು ಮತ್ತು 44 ಪಟ್ಟಣಗಳಲ್ಲಿ ಮೊಂಥಾ ಪರಿಣಾಮ ಬೀರಲಿದೆ. ತಗ್ಗು ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿದ್ದು 400ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಆಂಧ್ರ, ಒಡಿಶಾ ಕರಾವಳಿಯಲ್ಲಿ ಭಾರೀ ಮಳೆಯಾಗ್ತಿದ್ದು, ಕೆಲವೆಡೆ ಭೂಕುಸಿತವಾಗಿದೆ. ಮೊಂಥಾ ಚಂಡಮಾರುತ ಎಫೆಕ್ಟ್ ಹಿನ್ನೆಲೆ ಭಾರತೀಯ ರೈಲ್ವೆಯು 100ಕ್ಕೂ ಹೆಚ್ಚು ರೈಲುಗಳನ್ನು ಕ್ಯಾನ್ಸಲ್ ಮಾಡಿದೆ.
ಆಂಧ್ರದಲ್ಲಿ 30ಕ್ಕೂ ಹೆಚ್ಚು ಫ್ಲೈಟ್‌ಗಳ ಹಾರಾಟ ಬಂದ್ ಆಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣದ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತದ ಅಬ್ಬರವಿರುವ ಸಾಧ್ಯತೆಗಳಿವೆ.



