ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬಾಡಿ ವೋರ್ನ್ ಕ್ಯಾಮೆರಾ ಧರಿಸುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ ಆದೇಶ ನೀಡಿದ್ದಾರೆ. ಜೊತೆಗೆ ಅವರಿಗೆ ಉತ್ತೇಜನ ನೀಡಲು ತಾವೇ ಬಾಡಿ ವೋರ್ನ್ ಕ್ಯಾಮೆರಾ ಧರಿಸಿದ್ದಾರೆ.
ಗಸ್ತು ತಿರುಗುವಾಗ ಬಾಡಿ ವೋರ್ನ್ ಕ್ಯಾಮೆರಾಗಳನ್ನು ಧರಿಸುವಂತೆ ನಗರ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೂಚನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನಮ್ಮ 112 ರ ಗಸ್ತು ಅಧಿಕಾರಿಗಳು ಈಗ ದೇಹಕ್ಕೆ ಧರಿಸಿರುವ ಕ್ಯಾಮೆರಾಗಳನ್ನು (ಬಿಡಬ್ಲ್ಯೂಸಿ) ಧರಿಸಲಿದ್ದಾರೆ. ಅವರ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಗಳು ಮತ್ತು ಅವರು ತೆಗೆದುಕೊಳ್ಳುವ ಕ್ರಮಗಳು ಈ ಕ್ಯಾಮೆರಾದಲ್ಲಿ ದಾಖಲಾಗಲಿವೆ” ಎಂದಿದ್ದಾರೆ.
ಮುಂದುವರೆದು, “ನೀವು ಈ ಕ್ರಮವನ್ನು ಮೆಚ್ಚಿದರೆ, ನಮ್ಮ ಗಸ್ತು ಅಧಿಕಾರಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಿ ಮತ್ತು ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ. ತಾವೇ ಬಾಡಿ ವೋರ್ನ್ ಕ್ಯಾಮೆರಾ ಧರಿಸಿ, ಅದರ ಫೊಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಇತರ ಪೊಲೀಸ್ ಸಿಬ್ಬಂದಿಗೂ ಉತ್ತೇಜನ ನೀಡಲಿದೆ.
ಗಲಭೆ, ಪ್ರತಿಭಟನೆ, ಬಂದೋಬಸ್ತ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಈ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಪೊಲೀಸರು ಬಂಧಿಸುವಾಗ ಮತ್ತು ವಿಚಾರಣೆ ವೇಳೆ ಕಡ್ಡಾಯವಾಗಿ ಕ್ಯಾಮರಾಗಳನ್ನು ಧರಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.
ಹೀಗಾಗಿ, ಆಧಾರರಹಿತ ಆರೋಪಗಳನ್ನು ಎದುರಿಸುವುದಕ್ಕಿಂತ ಹೆಚ್ಚಾಗಿ ದೇಹಕ್ಕೆ ಧರಿಸಿರುವ ಕ್ಯಾಮೆರಾವನ್ನು ಧರಿಸುವುದು ಪೊಲೀಸರ ಕರ್ತವ್ಯದಲ್ಲಿ ಪಾರದರ್ಶಕವಾಗಿರುತ್ತದೆ. 241 ಹೊಯ್ಸಳ ಗಸ್ತು ವಾಹನಗಳಿಗೂ ಬಾಡಿ ವೋರ್ ಕ್ಯಾಮೆರಾಗಳನ್ನು ವಿತರಿಸಲಾಗಿದೆ. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಹೊಯ್ಸಳ ಎಎಸ್‌ಐ ಅವರು ಸ್ಥಳಕ್ಕೆ ಭೇಟಿ ನೀಡುವಾಗ ಈ ಕ್ಯಾಮೆರಾ ಧರಿಸಬೇಕು. ದೂರಿನ ವಿಚಾರಣೆ ವೇಳೆ ಕ್ಯಾಮರಾ ಸ್ವಿಚ್ ಆನ್ ಮಾಡಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.