ಸರಗೂರು: ಯಡಿಯಾಲ ಸಮೀಪದ ಹೊಸವೀಡು ಗ್ರಾಮದಲ್ಲಿ ಮತ್ತೊಂದು ಹುಲಿ ಸೆರೆಯಾಗಿದೆ.
ಸರಗೂರು ತಾಲೂಕಿನ ಮುಳ್ಳೂರು ಸಮೀಪದ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ ಎಂಬವರನ್ನು ಬಲಿಪಡೆದಿದ್ದ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ಈ ವೇಳೆ ಯಡಿಯಾಲ ಸಮೀಪದ ಹೊಸವೀಡು ಬಳಿ ಮತ್ತೊಂದು ಹುಲಿ ಸೆರೆಯಾಗಿದೆ.
ಅರಣ್ಯ ಇಲಾಖೆಯು ಮುಳ್ಳೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೂಂಬಿಂಗ್ ಮಾಡುತ್ತಿದ್ದ ವೇಳೆ ಹೊಸವೀಡು ಸಮೀಪ ಹುಲಿ ಇರುವ ಸುಳಿವು ಸಿಕ್ಕಿದ್ದು, ಕೂಡಲೇ ಸಾಕಾನೆಗಳಾದ ಲಕ್ಷ್ಮಣ, ಮಹೇಂದ್ರ, ಭೀಮ, ಶ್ರೀಕಂಠ ಮೂಲಕ ತೆರಳಿದ ಅರಣ್ಯ ಇಲಾಖೆ ಬುಧವಾರ ಸಂಜೆ ಸುಮಾರು 5 ಗಂಟೆ ವೇಳೆಯಲ್ಲಿ ಒಂದೂವರೆ ವರ್ಷದ ಹೆಣ್ಣು ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಸೆರೆ ಸಿಕ್ಕ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. ಹುಲಿಯು ಆರೋಗ್ಯಕರವಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಕಾರ್ಯಾಚರಣೆಯಲ್ಲಿ 3 ಡ್ರೋನ್ ಬಳಸಲಾಗಿದ್ದು, 100ಕ್ಕೂ ಅಧಿಕ ಸಿಬ್ಬಂದಿ ಭಾಗಿಯಾಗಿದ್ದರು.
ಕಾರ್ಯಾಚರಣೆಯಲ್ಲಿ ಸಿಎಫ್ ಪ್ರಭಾಕರನ್, ಎಸಿಎಫ್ ಗಳಾದ ಡಿ.ಪರಮೇಶ್, ಸುರೇಶ್, ಆರ್ ಎಫ್ ಒ ಗಳಾದ ವಿವೇಕ್, ಹನುಮಂತಪ್ಪ, ರಾಜೇಶ್, ಪಶುವೈದ್ಯರಾದ ಡಾ.ರಮೇಶ್, ಡಾ.ವಸಿಂ ಮಿರ್ಜಾ, ಶಾರ್ಪ್ ಶೂಟರ್ ರಂಜನ್ ಇದ್ದರು.



