Friday, November 7, 2025
Google search engine

Homeರಾಜ್ಯಸುದ್ದಿಜಾಲಉತ್ತರ ಕರ್ನಾಟಕ ಕಬ್ಬು ಬೆಳೆಗಾರರ ಸಮಸ್ಯೆ: ಸಹಾಯ ಕೋರಿ ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಉತ್ತರ ಕರ್ನಾಟಕ ಕಬ್ಬು ಬೆಳೆಗಾರರ ಸಮಸ್ಯೆ: ಸಹಾಯ ಕೋರಿ ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬೆಳಗಾವಿ, ಬಾಗಲಕೋಟೆ, ವಿಜಯಪುರ, ವಿಜಯನಗರ, ಬೀದರ್, ಗದಗ, ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ವರದಿ :ಸ್ಟೀಫನ್ ಜೇಮ್ಸ್.

ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿ ಟನ್‌ ಕಬ್ಬಿಗೆ 3,500 ರೂಪಾಯಿ ನಿಗದಿಮಾಡಬೇಕೆಂದು ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು ಬೆಳಗಾವಿಯ ವಿವಿಧ ತಾಲ್ಲೂಕುಗಳಲ್ಲಿ ಸರ್ಕಾರ ವಿರುದ್ಧ ಹೋರಾಟ ತೀವ್ರಗೊಳಿಸಿದ್ದಾರೆ.

ಇಂದು (ನ 7) ಸಿಎಂ ಸಭೆ

ಕಬ್ಬಿನ ಬೆಂಬಲ ಬೆಲೆಗಾಗಿ ರೈತರು ಪಟ್ಟು ಹಿಡಿದರೆ, ಇತ್ತ ಸರ್ಕಾರ ಸಭೆ ಮೇಲೆ ಸಭೆ ಮಾಡುತ್ತಿದೆ. ಇಂದು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿದ್ದು, ಆ ಸಭೆ ಮೇಲೆಯೇ ಎಲ್ಲರ ಚಿತ್ತ ನೆಟ್ಟಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ತುರ್ತು ಅವಕಾಶ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬೆಳಗಾವಿ, ಬಾಗಲಕೋಟೆ, ವಿಜಯಪುರ, ವಿಜಯನಗರ, ಬೀದರ್, ಗದಗ, ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಗಂಭೀರ ಸಮಸ್ಯೆ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲು ತುರ್ತು ಅವಕಾಶ ನೀಡಬೇಕೆಂದು ಸಿಎಂ ಪ್ರಧಾನಿಯವರಿಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ಸಂಧಾನಕ್ಕೆ ರಾಜ್ಯ ಸರ್ಕಾರ ನಿರಂತರ ಪ್ರಯತ್ನಿಸಿದರೂ ಹೋರಾಟ ತೀವ್ರಗೊಂಡಿದೆ. ಕಟಾವು ಮತ್ತು ಸಾರಿಗೆ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ರೈತರಿಗೆ ಸಿಗುವ ಲಾಭ ಕಡಿಮೆ. ಪ್ರತಿ ಟನ್‌ಗೆ 800 ರಿಂದ 900 ರೂ. ವರೆಗೆ ವೆಚ್ಚ ಇರುತ್ತದೆ. ರೈತನಿಗೆ ತಲುಪುವ ಹಣ ಕೇವಲ ಪ್ರತಿ ಟನ್‌ಗೆ 2,600 ರಿಂದ 3 ಸಾವಿರ ರೂ. ಮಾತ್ರ. ಹೀಗಾಗಿ ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರೈತರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ

ಕಬ್ಬು ತೂಕ, ಇಳುವರಿ, ಕಟಾವು ಮತ್ತು ಬಿಲ್ ಪಾವತಿಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಸಮಿತಿಗಳನ್ನು ರಚಿಸಲಾಗಿದೆ. ಸರ್ಕಾರವು ಎಪಿಎಂಸಿಗಳಲ್ಲಿ ಸ್ಥಾಪಿಸಿರುವ ತೂಕದ ಯಂತ್ರಗಳಲ್ಲಿ ಉಚಿತವಾಗಿ ತೂಕ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಿದ್ದೇವೆ. ಈ ಕ್ರಮಗಳ ಹೊರತಾಗಿಯೂ, ರೈತರು ಅತೃಪ್ತರಾಗಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಅಂತ ಪತ್ರದಲ್ಲಿ ಸಿಎಂ ವಿವರಿಸಿದ್ದಾರೆ.

ರೈತರು ನಷ್ಟ ಅನುಭವಿಸುವಂತಾಗಿದೆ

2025-26ರ ಹಂಗಾಮಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ಕ್ವಿಂಟಲ್‌ಗೆ 355 ರೂ. (ಪ್ರತಿ ಟನ್‌ಗೆ 23,550) ಆಗಿದ್ದು, ರಿಕವರಿ ದರ 10.25% ಆಗಿದೆ. ಆದರೆ ಪ್ರತಿ ಟನ್‌ಗೆ 800 ರಿಂದ 900 ರೂ. ರವರೆಗೆ ಕಟಾವು ಮತ್ತು ಸಾಗಣೆ ವೆಚ್ಚ ಕಡಿತಗೊಳಿಸಿದ ನಂತರ, ರೈತರಿಗೆ ಪ್ರತಿ ಟನ್‌ಗೆ ಸಿಗುವುದು ಕೇವಲ 2,600-3,000 ಮಾತ್ರ. ಅಲ್ಲದೆ ರಸಗೊಬ್ಬರ, ಕೂಲಿ, ನೀರಾವರಿ ಮತ್ತು ಸಾರಿಗೆ ವೆಚ್ಚಗಳಲ್ಲಿನ ತೀವ್ರ ಹೆಚ್ಚಳದಿಂದಾಗಿ ರೈತರು ನಷ್ಟ ಎದುರಿಸುವಂತಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ನಿವ್ವಳ 3, 500 ರೂಪಾಯಿ ಬೆಂಬಲ ಬೆಲೆ ನೀಡಿ

ಹೀಗಾಗಿ ನಮ್ಮ ರೈತರು ಕಾಲಮಿತಿಯೊಳಗೆ ಪ್ರತಿ ಟನ್ ಕಬ್ಬಿಗೆ ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ನಿವ್ವಳ 3,500 ರೂ. ನೀಡುವಂತೆ ಒತ್ತಾಯಿಸುತ್ತಿದ್ದಾರೆ. ರೈತರು ನ್ಯಾಯಯುತ, ಪಾರದರ್ಶಕ ಮತ್ತು ಜಾರಿಗೊಳಿಸಬಹುದಾದ ಬೆಲೆ ನಿಗದಿ ಕಾರ್ಯವಿಧಾನಗಳನ್ನು ಬಯಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ತಕ್ಷಣವೇ ಪ್ರತಿ ಟನ್ ಕಬ್ಬಿಗೆ ನಿವ್ವಳ 3,500 ರೂ. ನೀಡುವುದು, ರಿಕವರಿ ಪ್ರಮಾಣವನ್ನು ಇಳಿಸುವುದು, ಎಫ್‌.ಆರ್.ಪಿ. ದರ ಪರಿಷ್ಕರಿಸುವುದು, ಬಾಕಿ ಶೀಘ್ರ ಪಾವತಿ, ಸಕ್ಕರೆ ರಫ್ತು, ಎಥನಾಲ್‌ ಖರೀದಿ ಪ್ರಮಾಣ ಹೆಚ್ಚಳಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಅಂತ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular