ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ : ಚುನಾವಣಾಧಿಕಾರಿಯು ಚುನಾವಣೆ ಘೋಷಿಸಿ ಚುನಾವಣೆಗೆ ಗೈರು ಹಾಜರಾಗಿದ್ದು, ಇದರಿಂದ ನಿರ್ದೇಶಕರಿಗೆ ಅನ್ಯಾಯವಾಗಿದೆ. ಆದ್ದರಿಂದ ಚುನಾವಣಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಸಬಾ ಕೃಷಿ ಪತ್ತಿನ ಸಹಕಾರ ನಿಗಮದ ನೂತನ ನಿರ್ದೇಶಕ ಜೆ.ಡಿ.ಎಸ್ ಬೆಂಬಲಿತ ಶಿವರಾಜು ತಿಳಿಸಿದ್ದಾರೆ.
ಪಟ್ಟಣದ ಪತ್ರಕರ್ತರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,
ನ.4 ರಂದು ಮಂಗಳವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಿಗದಿ ಮಾಡಲಾಗಿತ್ತು.
ಇದಕ್ಕೂ ಮುನ್ನ ನಡೆದಿದ್ದ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಶಿವರಾಜು ಬಣದಿಂದ 9 ಮತ್ತು ದಶರಥ ಬೆಂಬಲಿತ 3 ಮಂದಿ ಜಯಗಳಿಸಿದ್ದರು.
ಈ ಸಂಬಂಧ ಚುನಾವಣಾ ಅಧಿಕಾರಿಯಾಗಿರುವ ರೇಣುಕಾ ರವರು ಎಲ್ಲಾ ನಿರ್ದೇಶಕರಿಗೂ ನೋಟಿಸ್ ನೀಡಿ ಚುನಾವಣಾ ದಿನಾಂಕವನ್ನು ನಿಗದಿ ಮಾಡಿದ್ದರು. ನಿಗದಿಯಾಗಿದ್ದ ಚುನಾವಣಾ ದಿನದಂದು ಎಲ್ಲಾ ಸದಸ್ಯರು ಚುನಾವಣೆಗೆ ಸಿದ್ಧತೆಯನ್ನ ನಡೆಸಿಕೊಂಡು ಆಗಮಿಸಿದ್ದರು.
ಆದರೆ ಚುನಾವಣಾ ಅಧಿಕಾರಿ ರೇಣುಕಾರವರು ಯಾವುದೇ ಸೂಚನೆಯನ್ನು ನೀಡದೇ ಚುನಾವಣೆಗೆ ಆಗಮಿಸದೆ ಕರ್ತವ್ಯ ಲೋಪವನ್ನೆಸಗಿದ್ದಾರೆ, ಇದಲ್ಲದೆ ಅಂದು ತಮ್ಮ ಮೊಬೈಲನ್ನು ಸ್ವಿಚ್ ಆಫ್ ಮಾಡಿಕೊಂಡು ಗೈರು ಹಾಜರಿಗೆ ನಿಖರ ಮಾಹಿತಿಯನ್ನು ನೀಡದೆ ಕರ್ತವ್ಯ ಲೋಪ ಎಸಗಿರುವ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಾಸಕ ಅನಿಲ್ ಚಿಕ್ಕಮಾದುರವರು ತಾವು ಮೈಸೂರು ಮತ್ತು ಚಾಮರಾಜನಗರ ಕೇಂದ್ರ ಬ್ಯಾಂಕ್ ಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರಿಗೆ ಬೆಂಬಲಿಸಿದ್ದ ದಶರಥ ಬಣವನ್ನ ಅಧ್ಯಕ್ಷರನ್ನಾಗಿ ಮಾಡಲು ಶಾಸಕ ಅನಿಲ್ ಚಿಕ್ಕಮಾದು ರವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಪ್ರಭಾವದಿಂದ ಚುನಾವಣಾ ಅಧಿಕಾರಿ ಚುನಾವಣೆಗೆ ಬಾರದಂತೆ ಮಾಡಿದ್ದಾರೆ ಎಂದು ಸಹ ಇದೇ ಸಂದರ್ಭದಲ್ಲಿ ಆರೋಪಿಸಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಂ. ರಾಜೇಂದ್ರ ಮಾತನಾಡಿ ಮೇಲ್ನೋಟಕ್ಕೆ ಜೆಡಿಎಸ್ ಪಕ್ಷವು ಅಧಿಕಾರ ಹಿಡಿಯುವುದನ್ನು ಸಹಿಸಲಾರದೆ ದುರುದ್ದೇಶವನ್ನಿಟ್ಟಿಕೊಂಡು ಚುನಾವಣೆ ನಡೆಸಿಲ್ಲ, ಚುನಾವಣಾ ಅಧಿಕಾರಿ ರೇಣುಕಾರವರನ್ನ ಈ ಕೂಡಲೇ ಅಮಾನತುಗೊಳಿಸಬೇಕು, ಅಲ್ಲದೇ ಇವರಿಗೆ ಕುಮ್ಮಕ್ಕು ನೀಡಿರುವ ರಾಜಕೀಯ ವ್ಯಕ್ತಿಗಳ ಮೇಲೆ ತನಿಖೆ ನಡೆಸಬೇಕು, ಇನ್ನು ಒಂದು ವಾರದಲ್ಲಿ ಸಂಬಂಧಪಟ್ಟ ಚುನಾವಣೆಯನ್ನು ಅಧಿಕಾರಿಗಳು ನಡೆಸಬೇಕು, ಇಲ್ಲವಾದಲ್ಲಿ ತಾಲ್ಲೂಕಿನಾದ್ಯತ ಉಗ್ರ ಹೋರಾಟವನ್ನು ರೈತರರೊಡಗೂಡಿ ಜೆಡಿಎಸ್ ನ ಮುಖಂಡರು ಕಾರ್ಯಕರ್ತರು ಸೇರಿ ಪಟ್ಟಣದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ನರಸಿಂಹೇಗೌಡ, ನಾಗರಾಜು, ಬೀರಪ್ಪ,ದೇವನಾಯಕ, ಶಿವಯ್ಯ, ಪ್ರಕಾಶ್, ರಂಗೇಗೌಡ, ಪ್ರದೀಪ್ ಇದ್ದರು.



