Friday, November 7, 2025
Google search engine

Homeರಾಜ್ಯಸುದ್ದಿಜಾಲನಂಜನಗೂಡು: ಸ್ಮಶಾನವಿಲ್ಲದೆ ಗೊದ್ದನಪುರ ಗ್ರಾಮಸ್ಥರ ಪರದಾಟ !

ನಂಜನಗೂಡು: ಸ್ಮಶಾನವಿಲ್ಲದೆ ಗೊದ್ದನಪುರ ಗ್ರಾಮಸ್ಥರ ಪರದಾಟ !

ಕಪಿಲಾ ನದಿ ತೀರದಲ್ಲಿಯೇ ಮೃತರ ಅಂತ್ಯ ಸಂಸ್ಕಾರ

ಗಂಗಾಧರ್ ನಂಜನಗೂಡು

ನಂಜನಗೂಡು : ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವ ವರುಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ಎಲ್ಲಾ ಸಮುದಾಯದವರಿಗೂ ಪ್ರತ್ಯೇಕ ಸ್ಮಶಾನ ಇಲ್ಲದ ಪರಿಣಾಮ ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಕಪಿಲಾ ನದಿ ತೀರದ ದಡವೇ ಸ್ಮಶಾನ ಜಾಗವಾಗಿ ಮಾರ್ಪಟ್ಟಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಾ ಬಂದಿದ್ದರೂ ನಮ್ಮನ್ನಾಳುವ ಸರ್ಕಾರಗಳು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದಲ್ಲಿ ಸುಮಾರು 2500 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಎಲ್ಲಾ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಆದರೆ ಯಾವ ಸಮುದಾಯಕ್ಕೂ ಪ್ರತ್ಯೇಕ ಸ್ಮಶಾನ ಭೂಮಿ ಇಲ್ಲದೇ ಕಪಿಲಾ ನದಿಯ ದಡದ ಕೆಸರಿನಲ್ಲಿ ಮೃತರ ಅಂತ್ಯಕ್ರಿಯೆಯನ್ನು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ಕೆಸರು

ಮಳೆಗಾಲದಲ್ಲಿ ನದಿ ತೀರದ ಸುತ್ತಮುತ್ತಲಿನ ಪ್ರದೇಶಗಳು ಕೆಸರಿನಿಂದ ಕೂಡಿರುತ್ತವೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಮೃತಪಟ್ಟರೆ ಶವ ಸಂಸ್ಕಾರಕ್ಕೆ ದಾರಿ ಇಲ್ಲದೆ ಕೊಳಚೆ ನೀರಿನಲ್ಲಿಯೇ ಶವಹೊತ್ತುಕೊಂಡು ನಡೆದುಕೊಂಡು ಹೋಗಬೇಕಿದೆ. ಕೆಸರು ಮಣ್ಣಿನಲ್ಲಿ ಜನರು ನಡೆಯುವುದೇ ಕಷ್ಟ. ಶವ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಸಾಕಷ್ಟು ಹೆಣಗಾಡಬೇಕಾಗಿದೆ. ಅಂತ್ಯಕ್ರಿಯೆಗೆ ತೆರಳುವ ಜನರು ಕೂಡ ಎದ್ದು,ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ.

ಗುಂಡಿ ತುಂಬೆಲ್ಲಾ ನೀರು

ನದಿಯ ಪಕ್ಕದಲ್ಲಿ ಶವ ಸಂಸ್ಕಾರ ಮಾಡುವ ಸಂದರ್ಭದಲ್ಲಿ ಶವವನ್ನು ಹೂಳಲು ಗುಂಡಿ ತೆಗೆದರೆ ಸಾಕು, ನೀರು ತುಂಬಿಕೊಳ್ಳುತ್ತದೆ. ಆದರೂ ವಿಧಿಯಿಲ್ಲದೆ ಶವ ಸಂಸ್ಕಾರ ಮಾಡುತ್ತಿದ್ದೇವೆ. ಇದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

ಗ್ರಾಮಸ್ಥರ ಮನವಿಗೆ ಸ್ಪಂದಿಸದ ಅಧಿಕಾರಿಗಳು

ಕಳೆದ 20 ವರ್ಷಗಳಿಂದ ಸ್ಮಶಾನ ಭೂಮಿ ನೀಡುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗೊದ್ದನಪುರ ಗ್ರಾಮದ ಜನತೆ. ಸರ್ವೆ ನಂಬರ್ 34 ಮತ್ತು 70 ರಲ್ಲಿ ಸರ್ಕಾರಿ ಭೂಮಿ ಇದೆ. ಇದರಲ್ಲಿ ಎರಡು ಎಕರೆ ಭೂಮಿಯನ್ನು ಸ್ಮಶಾನಕ್ಕೆ ನೀಡಿದರೆ ಅನುಕೂಲವಾಗುತ್ತದೆ. ಅಲ್ಲದೆ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಾರಷ್ಟೇ. ಮತ್ತೆ ನಾಪತ್ತೆಯಾಗುತ್ತಾರೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಈ ರೀತಿಯಾದರೆ ಇನ್ನುಳಿದ ಕ್ಷೇತ್ರಗಳ ಗತಿಯೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸರ್ಕಾರ ಗಮನಹರಿಸಬೇಕಾಗಿದೆ

ತಾಲೂಕಿನ ಹಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದೆ ಎಲ್ಲಾ ಸಮುದಾಯದ ಜನರು ಪರದಾಡುತ್ತಿದ್ದಾರೆ. ಸ್ವಂತ ಭೂಮಿ ಇರುವ ಜನರು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಜಮೀನು ಇಲ್ಲದ ಅತಿ ಸಣ್ಣ ಸಮುದಾಯದ ಜನರು ಕೆರೆಯ ಆವರಣ, ಕಾಲುವೆಗಳ ಏರಿ ಸೇರಿದಂತೆ ಹಲವು ಜಾಗಗಳಲ್ಲಿ ಅಂತ್ಯ ಸಂಸ್ಕಾರ ಮಾಡುವುದು ದಿನನಿತ್ಯ ಕಂಡು ಬರುತ್ತದೆ. ಎಲ್ಲಾ ಸಮುದಾಯದ ಜನರಿಗೆ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗುತ್ತಿದೆ. ಅದರ ಜೊತೆಗೆ ಸ್ಮಶಾನ ಭೂಮಿಯನ್ನು ಸರ್ಕಾರ ನೀಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿಗಾಗಿ ಭಾಗ್ಯಗಳ ಸರದಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ರಾಜ್ಯವು ದೇಶಕ್ಕೆ ಮಾದರಿಯಾಗಿದೆ ಎನ್ನುತ್ತಾರೆ. ಆದರೆ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲೂ ಸರ್ಕಾರ ಗಮನಹರಿಸಬೇಕಾಗಿದೆ.

ಸ್ಮಶಾನ ಇಲ್ಲದೆ ನಾವು ಗ್ರಾಮದಲ್ಲಿರುವ ಕಪಿಲಾ ನದಿಯ ತೀರದಲ್ಲಿ ಸುಮಾರು 20 ವರ್ಷಗಳಿಂದಲೂ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ನಮಗೆ ಸ್ಮಶಾನವೂ ಇಲ್ಲ, ದಾರಿಯೂ ಇಲ್ಲ. ಸ್ಮಶಾನ ಭೂಮಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಷ್ಟೇ ಬಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ

– ಚೆಲುವ ಸ್ವಾಮಿ, ದಸಂಸ ತಾಲೂಕು ಸಂಚಾಲಕ, ಗೊದ್ದನಪುರ ಗ್ರಾಮ

ಹೆಸರಿಗಷ್ಟೇ ಮುಖ್ಯಮಂತ್ರಿಗಳ ಕ್ಷೇತ್ರವಾಗಿದೆ. ಆದರೆ, ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲ. ಸರ್ವೆ ನಂಬರ್ 34 ಮತ್ತು 70ರಲ್ಲಿ ಖಾಲಿ ಇರುವ ಸರ್ಕಾರಿ ಜಾಗದಲ್ಲಿ ಸ್ಥಳವನ್ನು ಗುರುತಿಸಿ ಎರಡು ಎಕರೆಯನ್ನು ಸ್ಮಶಾನಕ್ಕೆ ನೀಡಿದರೆ ಅನುಕೂಲವಾಗಲಿದೆ. ಬದುಕಿದ್ದಾಗಲು ನೋವು, ಸತ್ತಾಗಲು ನೆಮ್ಮದಿಯಿಂದ ಅಂತ್ಯಕ್ರಿಯೆ ನಡೆಸಲಾಗದೇ ಪರದಾಡಬೇಕು.

– ರಾಕೇಶ್ ಗೌಡ, ಕಾಂಗ್ರೆಸ್ ಮುಖಂಡರು, ಗೊದ್ದನಪುರ.

ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ತುಂಬಾ ನೋವು ಆಗುತ್ತದೆ. ಇತ್ತ ತೆರಳಲು ದಾರಿಯೂ ಇಲ್ಲ, ಸರಿಯಾಗಿ ಅಂತ್ಯ ಸಂಸ್ಕಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಮೊದಲ ಬಾರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದಾಗಿನಿಂದಲೂ ಸ್ಮಶಾನ ಭೂಮಿ ನೀಡುವಂತೆ ಕೇಳಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇನ್ನಾದರೂ ಸಿಎಂ ಸಿದ್ದರಾಮಯ್ಯನವರು ಗಮನಹರಿಸಿ ನಮಗೆ ಸ್ಮಶಾನ ಭೂಮಿ ಭಾಗ್ಯವನ್ನು ನೀಡಬೇಕಿದೆ.

– ಸೋಮೇಶ್, ಅಂಬೇಡ್ಕರ್ ಸಂಘದ ಅಧ್ಯಕ್ಷರು,ಗೊದ್ದನಪುರ.

ಸ್ಮಶಾನ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಗೊದ್ದನಪುರ ಗ್ರಾಮಕ್ಕೆ ಭೇಟಿ ನೀಡಿ, ಈಗಾಗಲೇ ಪರಿಶೀಲನೆ ನಡೆಸಿದ್ದೇನೆ. ಸ್ಮಶಾನ ಸ್ಥಳವನ್ನು ಗುರುತಿಸಲಾಗಿದ್ದು, ಸರ್ವೆ ನಂಬರ್ 222 ರಲ್ಲಿ ಸ್ಮಶಾನಭೂಮಿ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇನ್ನು ಕೆಲವೇ ತಿಂಗಳಲ್ಲಿ ಗೊದ್ದನಪುರ ಗ್ರಾಮಸ್ಥರ ಸಮಸ್ಯೆ ಬಗೆಹರಿಸಲಾಗುವುದು.

-ಶಿವಕುಮಾರ್ ಕಾಸ್ನೂರು, ತಹಶೀಲ್ದಾರ್ ನಂಜನಗೂಡು

RELATED ARTICLES
- Advertisment -
Google search engine

Most Popular