ಮಂಗಳೂರು : ಬಿಹಾರ ಅಸೆಂಬ್ಲಿ ಚುನಾವಣೆಯ ಫಲಿತಾಂಶವನ್ನು ಅರಗಿಸಿಕೊಳ್ಳಲಾಗದೆ ರಾಹುಲ್ ಗಾಂಧಿ, ಅವರ ತಂಡ ಮತ್ತೆ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ದೇಶದ ಜನತೆ ಯಾವತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಶುಕ್ರವಾರ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿ ಇರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಿಹಾರ ಬಿಜೆಪಿ ವಿಜಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.
ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವಕ್ಕೆ ಅಭೂತಪೂರ್ವ ಜಯ ಲಭಿಸಿದೆ. ಅಲ್ಲಿ ತೇಜಸ್ವಿ ಯಾದವ್ ಘಟಬಂಧನ್ ಸೋಲು ಕಂಡಿದೆ. ಮತ ಕಳವು ವಿಚಾರದಲ್ಲಿ ಜನತೆಯ ಹಾದಿ ತಪ್ಪಿಸಲು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ನಡೆಸಿದ ಅಪಪ್ರಚಾರಕ್ಕೆ ಸೋಲಾಗಿದೆ ಅಂದರು.
ಕರ್ನಾಟಕ ಹಾಗೂ ತೆಲಂಗಾಣಗಳಲ್ಲಿ ಕಾಂಗ್ರೆಸ್ ಅಧಿಕಾರಿ ಹಿಡಿದಿದೆ. ಆಗ ಮತ ಚೋರಿ ಬಗ್ಗೆ ಮಾತೆತ್ತದ ಕಾಂಗ್ರೆಸಿಗರು, ಅವರು ಸೋಲು ಕಂಡ ಕಡೆಗಳಲ್ಲೆಲ್ಲ ಮತ ಚೋರಿ ಎಂದು ಆರೋಪಿಸಿ ಓಡಾಡಿಕೊಂಡಿದ್ದಾರೆ ಎಂದು ಶೋಭಾ ಆರೋಪಿಸಿದರು.
ಈ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕರಾದ ಕ್ಯಾ.ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ಪೂರ್ಣಿಮಾ ಮತ್ತಿತರರಿದ್ದರು.



