ವರದಿ :ಸ್ಟೀಫನ್ ಜೇಮ್ಸ್.
ಮೃಗಗಳಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್‌ನಿಂದ ಸಾವು ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ. ಆದರೆ, ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಬೆಳಗಾವಿ: ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕಳೆದ 2 ದಿನಗಳಲ್ಲಿ 28 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮೃಗಾಲಯದ ಎಸಿಫ್ ನಾಗರಾಜ್ ಬಾಳೆಹೊಸೂರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮೃಗಗಳಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್‌ನಿಂದ ಸಾವು ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ. ಆದರೆ, ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಒಟ್ಟು 38 ಕೃಷ್ಣಮೃಗಗಳಲ್ಲಿ ಇದುವರೆಗೆ 28 ಮೃಗಗಳು ಎರಡೇ ದಿನಗಳಲ್ಲಿ ಸಾವನ್ನಪ್ಪಿದ್ದು, ಮೊದಲ ದಿನ 18 ಕೃಷ್ಣಮೃಗಗಳು ಸಾವನ್ನಪ್ಪಿದ್ದರೆ, ಎರಡನೇ ದಿನ 10 ಕೃಷ್ಣಮೃಗಗಳು ಸಾವನ್ನಪ್ಪಿವೆ. ಅನುಮಾನಾಸ್ಪದವಾಗಿ ಮೃತಪಟ್ಟ ಕೃಷ್ಣಮೃಗಕ್ಕೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮೃಗಗಳ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಲು ಬೆಂಗಳೂರಿನ ಬನ್ನೇರುಘಟ್ಟ ಪ್ರಾಣಿಶಾಸ್ತ್ರ ಉದ್ಯಾನವನದ ಅಧಿಕಾರಿಗಳಿಗೆ ಮಾದರಿಯನ್ನು ಕಳುಹಿಸಿದ್ದೇವೆಂದು ಹೇಳಿದ್ದಾರೆ.
ಇಂದು(NOV15) ಒಂದೇ ದಿನ 20 ಕೃಷ್ಣ ಮೃಗಗಳ ಸಾವು
ನವೆಂಬರ್ 13 ರಂದು ಮೃಗಾಲಯದಲ್ಲಿ 8 ಕೃಷ್ಣ ಮೃಗಗಳ ಸಾವು ಸಂಭವಿಸಿತ್ತು. ಆದರೆ, ಇಂದು ಒಂದೇ ದಿನ 20 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಏಕಾಏಕಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
ಬ್ಯಾಕ್ಟೀರಿಯಾ ಇನ್ಫೆಕ್ಷನ್ ಶಂಕೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣ ಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಎರಡು ದಿನಗಳ ಹಿಂದೆ ಮೃತಪಟ್ಟ ಮೃಗಗಳ ಮೃತದೇಹಗಳನ್ನು ವಿಶ್ಲೇಷಣೆಗೆ ಲ್ಯಾಬ್ ಗೆ ಕಳುಹಿಸಲಾಗಿತ್ತು.
ಲ್ಯಾಬ್ ವರದಿ ಬರುವ ಮುನ್ನವೇ ಮತ್ತಷ್ಟು ಸಾವು
ಲ್ಯಾಬ್ ವರದಿ ಇನ್ನಷ್ಟೇ ಬರಬೇಕಿದ್ದು, ಇಂದು ಮತ್ತೆ 20 ಮೃಗಗಳು ಸಾವನ್ನಪ್ಪಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮರಣೋತ್ತರ ಪರೀಕ್ಷೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
ಏತನ್ಮಧ್ಯೆ, ಘಟನೆ ಬಳಿಕ ಎಸಿಎಫ್ ನಾಗರಾಜ್ ಮೃಗಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮೃಗಾಲಯದಲ್ಲಿ ಮೃಗಗಳ ಆರೈಕೆ, ಆಹಾರ, ನೀರಿನ ಗುಣಮಟ್ಟ ಹಾಗೂ ಸೋಂಕಿನ ಹರಡುವಿಕೆ ಕುರಿತಂತೆ ಪರಿಶೀಲನೆ ಮುಂದುವರಿದಿದೆ.



