ವರದಿ :ಸ್ಟೀಫನ್ ಜೇಮ್ಸ್.
ಕಂಗಾಲಾದ ಪ್ರಾಣಿ ಪ್ರಿಯರು, ಅರಣ್ಯ ಇಲಾಖೆ ಹೆಜ್ಜೆ ತಪ್ಪಿದ್ದೆಲ್ಲಿ?
ಬೆಳಗಾವಿ: ಮುದ್ದು ಮುಖ ತೋರಿಸಿ, ಅಗಲವಾದ ಕಣ್ಣರಳಿಸಿ, ಉದ್ದ ಕೊಂಬನ್ನು ಬೀಸಿ ರಂಜಿಸುತ್ತಿದ್ದ ಕೂಸುಗಳು ಈಗ ಸತ್ತು ಬಿದ್ದಿವೆ. ನಿನ್ನೆ, ಮೊನ್ನೆಯೇ ಜನರಂಜನೆಗೆ ಮನರಂಜನೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಕೃಷ್ಣಮೃಗಗಳ ಸಾವು ಮಮ್ಮಲ ಮರುಗುವಂತೆ ಮಾಡಿದೆ. ಅವುಗಳ ತುಂಟ ಕಣ್ಣುಗಳು ಈಗಾಗಲೇ ಬೆಂಕಿಯಲ್ಲಿ ಬೆಂದುಹೋಗಿವೆ.
ಅವುಗಳ ಆಟೋಟ ನೋಡಿದ ಜನರಿಗೆ ತಮ್ಮ ಮನೆಯ ಮಕ್ಕಳನ್ನೇ ಕಳೆದುಕೊಂಡಷ್ಟು ಸಂಕಟ. ಸಮೀಪದ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಏಕಾಏಕಿ 28 ಕೃಷ್ಣ ಮೃಗಗಳು ಮೃತಪಟ್ಟ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಪ್ರಾಣಿ ಪ್ರಿಯರು, ಶಾಲಾ ಮಕ್ಕಳನ್ನು ತೀವ್ರ ನೋವಿಗೆ ತಳ್ಳಿದೆ. ಈ ಸಾವಿಗೆ ಕಾರಣ ಏನೇ ಕೊಡಬಹುದು; ಆದರೆ ಹೊಣೆ ಯಾರು ಎಂಬ ಪ್ರಶ್ನೆಗೆ ಅರಣ್ಯ ಇಲಾಖೆ ಉತ್ತರ ಕೊಡಲೇಬೇಕಾಗಿದೆ. ಈ ಹಿಂದೆ ಕೂಡ ಇದೇ ಮೃಗಾಲಯದಲ್ಲಿ ಒಂದು ಹುಲಿ, ಒಂದು ಸಿಂಹ ಕೂಡ ಪ್ರಾಣ ಕಳೆದುಕೊಂಡಿದ್ದವು. ಅವು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿತ್ತು. ಕೆಲವೇ ದಿನಗಳಲ್ಲಿ ಮತ್ತೆ ಮೃಗಗಳನ್ನು ಕರೆತರಲಾಗಿತ್ತು. ಇದರಿಂದ ಸತ್ತ ಪ್ರಾಣಿಗಳನ್ನು ಮರೆತ ಪ್ರವಾಸಿಗರು, ಹೊಸ ಪ್ರಾಣಿಗಳನ್ನು ನೋಡುತ್ತ ಸಫಾರಿ ಶುರು ಮಾಡಿದರು. ಆದರೆ, ಈಗ ಸತ್ತಿದ್ದು ಪ್ರವಾಸಿಗರಿಗೆ, ಮಕ್ಕಳಿಗೆ ತೀರ ಆಪ್ತವಾದ ಜೀವಗಳು. ಹಸಿರೆಲೆ ತಿಂದು ಬದುಕುವ ಈ ಮೃದು ಮನಸ್ಸಿನ ಜೀವಿಗಳಿಗೇಕೆ ಇಂಥ ದಾರುಣ ಸಾವು ಬಂದಿದೆ ಎಂಬುದು ದಂಗು ಬಡಿಸಿದೆ. ಮಾತ್ರವಲ್ಲ; ಇಷ್ಟು ದೊಡ್ಡ ಸಂಖ್ಯೆಯ ಸಾವು ದೇಶದ ಇತರ ಯಾವುದೇ ಮೃಗಾಲಯದಲ್ಲಿ ಈವರೆಗೂ ಸಂಭವಿಸಿಲ್ಲ ಎಂಬುದನ್ನು ಅರಣ್ಯ ಇಲಾಖೆ ಅಧಿಕಾರಿಗಳೇ ಖಚಿತಪಡಿಸಿದ್ದಾರೆ. ಬೆಳಗಾವಿಯಲ್ಲೇ ಏಕೆ ಇಂಥ ಘಟನೆ ಜರುಗಿತು ಎಂಬುದಕ್ಕೆ ನೇರವಾದ ಉತ್ತರ ಕೊಡಬೇಕಾದವರೂ ಅವರೇ.

ಹೆಜ್ಜೆ ತಪ್ಪಿದ್ದು ಎಲ್ಲಿ?: ಕಿರು ಮೃಗಾಲಯ ಮೇಲ್ದರ್ಜೆಗೇರಿಸಿ ‘ಮಧ್ಯಮ ಮೃಗಾಲಯ’ ಮಾಡಲು ಪ್ರಸ್ತಾವ ಸಲ್ಲಿಸಿದ್ದು, ಮೌಖಿಕ ಸಮ್ಮತಿ ಕೂಡ ಸಿಕ್ಕಿದೆ. ಈ ಸಂದರ್ಭದಲ್ಲೇ ನಡೆದ ಈ ಅವಘಡ ಎಲ್ಲರನ್ನೂ ಆತಂಕಕ್ಕೆ ತಳ್ಳಿದೆ. ಹೆಜ್ಜೆ ತಪ್ಪಿದ್ದು ಎಲ್ಲಿ ಎಂಬುದು ಎಲ್ಲರನ್ನೂ ಚಿಂತೆಗೆ ತಳ್ಳಿದೆ.
‘ಸದ್ಯ 15 ಹೆಕ್ಟೇರ್ ಪ್ರದೇಶವಿದ್ದು, ಮಧ್ಯಮ ಮೃಗಾಲಯ ಮಾಡಲು ಕನಿಷ್ಠ 35 ಹೆಕ್ಟೇರ್ ಪ್ರದೇಶ ಬೇಕು. ಈ ಮೃಗಾಲಯ ಸುತ್ತ ಸಾಕಷ್ಟು ಅರಣ್ಯ ಪ್ರದೇಶವಿದ್ದು, ಅದರಲ್ಲಿ ಇನ್ನೂ 20 ಹೆಕ್ಟೇರ್ ಪ್ರದೇಶ ಬಳಸಿಕೊಳ್ಳಲು ಸಾಧ್ಯವಿದೆ’ ಎಂದು ಅಧಿಕಾರಿಗಳು ಕೇಂದ್ರೀಯ ಮೃಗಾಲಯ ಪ್ರಾಧಿಕಾರಕ್ಕೆ ಮನವರಿಕೆ ಮಾಡಿದ್ದಾರೆ. ‘ಹುಲಿಗಳು, ಸಿಂಹಗಳು, ಜಿಂಕೆ ಹಿಂಡು, ಮೊಸಳೆ ಮತ್ತು ವಿವಿಧ ಪ್ರಭೇದಗಳ ಪಕ್ಷಿಗಳೂ ಸೇರಿ ಈಗ 205 ಬಗೆಯ ಪ್ರಾಣಿ- ಪಕ್ಷಿಗಳು ಇಲ್ಲಿವೆ. ಮಧ್ಯಮ ಮೃಗಾಲಯವಾದರೆ ಪ್ರಾಣಿ~ ಪಕ್ಷಿಗಳ ಸಂಖ್ಯೆಯೂ ದ್ವಿಗುಣವಾಗಲಿದೆ.
ಸದ್ಯ ಇರುವ ಹುಲಿ ಸಫಾರಿಯನ್ನು ಇನ್ನೂ 20 ಹೆಕ್ಟೇರ್ ವ್ಯಾಪ್ತಿಗೆ ವಿಸ್ತರಿಸುವುದು. ಹುಲಿ- ಸಿಂಹಗಳಂತೆಯೇ ಜಿರಾಫೆ, ನೀರಾನೆ, ಜೀಬ್ರಾ, ಜಿಂಕೆ, ಕಡವೆ, ಸೀಳುನಾಯಿ, ಕಾಡುಕೋಣ, ಆಸ್ಟ್ರಿಚ್ ಪಕ್ಷಿಗಳನ್ನು ಸಾಕುವುದು ಮುಂತಾದ ಅಭಿವೃದ್ಧಿಗೆ ಹೆಜ್ಜೆ ಇಡಲಾಗಿದೆ.
ಕೃಷ್ಣಮೃಗಗಳ ಸಾವಿಗೆ ನಿಖರ ಕಾರಣ ಅರಿಯಲು ಬೆಂಗಳೂರಿನಿಂದ ಸೂಕ್ಷ್ಮಜೀವ ಶಾಸ್ತ್ರಜ್ಞರ ಒಂದು ತಂಡ ಕರೆಸಿದ್ದೇವೆ. ಅವರು ಕೂಲಂಕಶ ಪರಿಶೀಲನೆ ನಡೆಸಲಿದ್ದಾರೆ
ಕ್ರಾಂತಿಕುಮಾರ್ ಡಿಸಿಎಫ್ ಬೆಳಗಾವಿ
ಎಂಟು ಕೃಷ್ಣ ಮೃಗ ಮೃತಪಟ್ಟಾಗಲೇ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು
ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ
ವಾರಕ್ಕೊಮ್ಮೆ ತಪಾಸಣೆಯೇ?
ಯಾವುದೇ ಮೃಗಾಲಯಕ್ಕೆ ಪ್ರಾಣಿ ಪಕ್ಷಿಗಳನ್ನು ಕರೆತಂದ ಮೇಲೆ ಅವುಗಳ ಲಾಲನೆ– ಪಾಲನೆ- ಜೋಪಾನದ ಸಂಪೂರ್ಣ ಜವಾಬ್ದಾರಿ ಅರಣ್ಯ ಇಲಾಖೆಯದ್ದೇ. ಪ್ರಾಣಿಗಳು ಮಕ್ಕಳಿಗಿಂತ ಹೆಚ್ಚು ನಾಜೂಕು. ಹಾಗಾಗಿ ಮಕ್ಕಳಿಗಿಂತ ಹೆಚ್ಚು ಜೋಪಾಣವಾಗಿ ನೋಡಿಕೊಳ್ಳಬೇಕು ಎಂಬುದು ವಿಧಿತ. ಮೃಗಾಲಯದಲ್ಲಿ ಪ್ರತ್ಯೇಕ ವೈದ್ಯರು ಆಪರೇಷನ್ ಥೇಟರ್ ಫಸ್ಟ್‌ಏಡ್ ಥೇಟರ್ ಕ್ವಾರಂಟೈನ್ ಸೆಂಟರ್ ಸೇರಿದಂತೆ ಎಲ್ಲವೂ ಇರಬೇಕಾದುದು ಅಗತ್ಯ. ಯಾವುದೇ ಪ್ರಾಣಿಗೆ ನಂಜು ಅಥವಾ ಸೋಂಕು ಅಂಟಿಕೊಂಡಾಗ ಅದನ್ನು ತಕ್ಷಣ ಕ್ವಾರಂಟೈನ್ ಮಾಡಿ ಇತರ ಪ್ರಾಣಿಗಳಿಗೂ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂಬುದು ನಿಯಮ. ‘ಈ ಕಿರು ಮೃಗಾಲಯದಲ್ಲಿಯೂ ವೈದ್ಯರು ಇದ್ದು ವಾರಕ್ಕೊಮ್ಮೆ ಪ್ರಾಣಿಗಳ ತಪಾಸಣೆ ಮಾಡುತ್ತಾರೆ’ ಎಂದು ಡಿಸಿಎಫ್ ಕ್ರಾಂತಿಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. ಹೀಗೆ ತಪಾಸಣೆ ಮಾಡಿದ್ದರೆ ಬ್ಯಾಕ್ಟಿರಿಯಾ ರೋಗಾಣು ಸೋಂಕಿನ ಲಕ್ಷಣಗಳು ಏಕೆ ಕಾಣಿಸಿಲ್ಲ ಎಂಬ ಪ್ರಶ್ನೆ ಪರಿಸರವಾದಿಗಳನ್ನು ಕಾಡುತ್ತಿದೆ. “ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಪ್ರಯೋಗಾಲಯದ ವರದಿ ಬಂದ ನಂತರ ಸಾವಿಗೆ ಸ್ಪಷ್ಟ ಉತ್ತರ ಸಿಗಲಿದೆ. ಸದ್ಯಕ್ಕೆ ಇತರ ಪ್ರಾಣಿಗಳ ಮೇಲೂ ನಿಗಾ ಇಟ್ಟಿದ್ದೇವೆ. ನಾನು ಕೂಡ ಖುದ್ದು ಪರಿಶೀಲಿಸಿದ್ದೇನೆ’ ಎಂದೂ ಡಿಸಿಎಫ್ ಹೇಳುತ್ತಾರೆ.
‘ನರೇಗಾ’ದ ಮೊದಲ ಮೃಗಾಲಯ ಎಂಬ ಹೆಗ್ಗಳಿಕೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ (ನರೇಗಾ) ನಿರ್ಮಿಸಿದ ದೇಶದ ಮೊದಲ ಮೃಗಾಲಯ ಎಂಬುದಕ್ಕೆ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯ ಪಾತ್ರವಾಗಿದೆ. ಇಲ್ಲಿನ ಆರ್‌ಎಫ್‌ಒ ಪವನ್ ಕುರನಿಂಗ ಹಾಗೂ ಸಿಬ್ಬಂದಿ ಕಾಳಜಿಯ ಕಾರಣಕ್ಕೆ ಅಭಿವೃದ್ಧಿ ಕೂಡ ಕಂಡಿದೆ. ಬೇಸಿಗೆಯಲ್ಲೂ ದಟ್ಟ ಹಸಿರಿನಿಂದ ಕೂಡಿರುವಂತೆ ಇದನ್ನು ನಿರ್ವಹಣೆ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. 1989ರಲ್ಲಿ ನಿಸರ್ಗಧಾಮ (ಚಿಗರಿ ಮಾಳ) ಆಗಿದ್ದ ಈ ಪ್ರದೇಶವನ್ನು 2020ರಲ್ಲಿ ಕಿರು ಮೃಗಾಲಯ ಎಂದು ಅಭಿವೃದ್ಧಿ ಮಾಡಲಾಗಿದೆ. ಸರಿಸೃಪ ಪಾರ್ಕ್ ಮೊಸಳೆ ಪಾರ್ಕ್ ತ್ರಿಡಿ ವೀಕ್ಷಣಾಲಯ ವೀಕ್ಷಣಾ ಗೋಪುರ ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳೂ ಇಲ್ಲಿ ನಡೆದಿವೆ.



