ಮಂಗಳೂರು (ದಕ್ಷಿಣ ಕನ್ನಡ): ಕಳೆದ ಆರು ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಬಾಕಿ ಇರುವ ಕನಿಷ್ಟ ಕೂಲಿ, 2024ರ ಎಪ್ರಿಲ್‌ನಿಂದ ಜಾರಿಗೊಂಡ ಹೊಸ ಕನಿಷ್ಟ ಕೂಲಿ ಸೇರಿದಂತೆ ಬಾಕಿಯನ್ನು ನೀಡುವಂತೆ ಒತ್ತಾಯಿಸಿ ನವೆಂಬರ್ 24ರಿಂದ ಬೀಡಿ ಕಾರ್ಮಿಕರು ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ. ಅವರು ಮಂಗಳೂರಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು.
ನ. 24ರಿಂದ 27ರವರೆಗೆ ಹಗಲು ರಾತ್ರಿ ಮಂಗಳೂರು ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ನ. 28ರಂದು ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ ಚಲೋ ಕಾರ್ಯಕ್ರಮ ನಡೆಯಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 10 ಲಕ್ಷ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 3ಲಕ್ಷದಷ್ಟು ಬಡವರು ಬೀಡಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಹೆಚ್ಚಾಗಿ ಮಹಿಳೆಯರೇ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, 2018ರಿಂದ 2024ರವರೆಗಿನ ಕನಿಷ್ಟಕೂಲಿ ಬಾಕಿ ಏಕಗಂಟಿನಲ್ಲಿ ಪರಿಹಾರವವಾಗಿ ನೀಡಬೇಕಿದೆ. ಅದಲ್ಲದೆ 2024ರ ಎಪ್ರಿಲ್‌ನಿಂದ ಜಾರಿಯಾದ ಕನಿಷ್ಟ ಕೂಲಿ ಹಾಗೂ ಪ್ರಸಕ್ತ ನಿಗದಿಗೊಳಿಸಿದ 301.92 ರೂ. ದರವನ್ನು ಬೀಡಿ ಮಾಲಕರು ಒದಗಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು, ವಕೀಲ ಬಿಎಂ ಭಟ್, ಕೋಶಾಧಿಕಾರಿ ಸದಾಶಿವ ದಾಸ್, ಉಪಾಧ್ಯಕ್ಷರಾದ ವಸಂತ ಆಚಾರ್, ಪದ್ಮಾವತಿ ಶೆಟ್ಟಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.



