ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ನಿಲ್ಲಿಸಿರುವುದರಿಂದ ಪ್ರವಾಸಿಗರು ರೆಸಾರ್ಟ್‌ಗಳಿಗೆ ಬಾರದ ಹಿನ್ನಲೆ ರೆಸಾರ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2000 ಉದ್ಯೋಗಿಗಳಿಗೆ ಅತೀವ ತೊಂದರೆ ಉಂಟಾಗಿದೆ ಎಂದು ತಾಲ್ಲೂಕಿನ ತೆರಾ ವೈಲ್ಡ್ ಲೈಫ್ ರೆಸಾರ್ಟ್‌ನ ಹೊಸಮಾಳ ಸ್ವಾಮಿ ಆರೋಪಿಸಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಸುಮಾರು 12 ರೆಸಾರ್ಟ್ ಗಳ ಕಾರ್ಮಿಕರು ಜಮಾಯಿಸಿ ಸಫಾರಿ ಸ್ಥಗಿತವನ್ನು ವಿರೋಧಿಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಎಚ್.ಡಿ. ಕೋಟೆ ತಾಲ್ಲೂಕು ಪ್ರಾಣಿ, ವನ್ಯ ಮತ್ತು ಜಲ ಸಂಪತ್ತಿನಿಂದ ಕೂಡಿರುವುದರಿಂದ ಪ್ರವಾಸಿಗರ ಆಕರ್ಷಣೆಯಿಂದ ತಾಲ್ಲೂಕಿನಲ್ಲಿ ಹಲವು ರೆಸಾರ್ಟ್ ಗಳು ತಲೆ ಎತ್ತಿವೆ, ಸುಮಾರು 2000 ಮಂದಿ ತಾಲ್ಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗಗಳು ಸಹ ದೊರೆತಿವೆ, ತಾಲ್ಲೂಕಿನಲ್ಲಿ ಯಾವುದೇ ಕಾರ್ಖಾನೆಗಳಿಲ್ಲದ್ದರಿಂದ ರೆಸಾರ್ಟ್ ಗಳೇ ಇಲ್ಲಿನ ಜನರಿಗೆ ಉದ್ಯೋಗವನ್ನು ನೀಡಿವೆ, ಆದರೀಗ ಏಕಾಏಕಿ ಸಫಾರಿ ನಿಲ್ಲಿಸಿರುವುದರಿಂದ ನಮ್ಮ ಉದ್ಯೋಗಕ್ಕೆಕುತ್ತು ಬಂದೊದಗಿದೆ ಎಂದು ಬೇಸರಿಸಿದರು.
ಸಂದೇಶ್ ವಾಟರ್ ಎಡ್ಜ್ ಸಿಬ್ಬಂದಿ ದೇವಯ್ಯ ಮಾತನಾಡಿ ತಾಲ್ಲೂಕಿನಲ್ಲಿರುವ ಅಧಿಕೃತ ರೆಸಾರ್ಟ್‌ಗಳು ತಾಲ್ಲೂಕಿನಲ್ಲಿ ನಡೆಯುವ ಅನೇಕ ಜನಪರ ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡುತ್ತಾ ಸ್ಥಳೀಯರಿಗೆ ಆಸರೆಯಾಗಿವೆ, ಉದ್ಯೋಗ ನೀಡುವುದರ ಮೂಲಕ ಅನೇಕ ನಿರುದ್ಯೋಗಿಗಳು ಉದ್ಯೋಗಿಗಳಾಗಿದ್ದಾರೆ. 2000 ಸಾವಿರ ಕುಟುಂಬಸ್ಥರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು,. ಜೊತೆಗೆ ಇಲ್ಲಿನ ರೆಸಾರ್ಟ್ ಗಳು ಸ್ಥಳೀಯರಿಗೆ ಉದ್ಯೋಗವನ್ನು ನೀಡಿ ತಾಲ್ಲೂಕಿನ ಜನತೆಯ ಮನಗೆದ್ದಿದ್ದರು, ಈಗ ಸಫಾರಿ ನಿಂತಿರುವ ಕಾರಣ ಅದೇ ರೆಸಾರ್ಟ್ ಗಳು ತಮ್ಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ತೆಗೆಯುವ ನಿರ್ಧಾರಕ್ಕೆ ಬಂದಿವೆ. ಇದರಿಂದ ಅದೆಷ್ಟೋ ಕುಟುಂಬಗಳು ಬೀದಿಪಾಲಾಗಲಿವೆ, ಇದಕ್ಕೆ ಸರ್ಕಾರವೇ ನೇರ ಕಾರಣ ಎಂದು ಬೇಸರಿಸಿದರು.
ಕಾರ್ಮಿಕ ಮಹಿಳೆ ಯಶೋಧ ಮಾತನಾಡಿ, ನಾವು ಜಮೀನಿನಲ್ಲಿ ಕೂಲಿ ಮಾಡಲು ಸಾಧ್ಯವಿಲ್ಲ, ಇದರಿಂದಾಗಿ ಸ್ಥಳೀಯವಾಗಿ ರೆಸಾರ್ಟ್ ನಲ್ಲಿ ದಿನಗೂಲಿ ನೌಕರಳಾಗಿ ಸೇವೆ ಸಲ್ಲಿಸುತ್ತಿದ್ದೇವೆ, ಆದರೀಗ ನಮ್ಮ ಕೆಲಸಕ್ಕೆ ಕುತ್ತು ಬಂದೊದಗಿದೆ. ಅಧಿಕಾರಿಗಳು ಯೋಚಿಸಿ ನಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ತಹಸಿಲ್ದಾರ್ ಶ್ರೀನಿವಾಸ್ ಮಾತನಾಡಿ, ಈ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.
ಮನವಿ ಸಲ್ಲಿಸುವ ವೇಳೆ ಅಧಿಕೃತ ರೆಸಾರ್ಟ್ ಗಳಾದ ವಾಟರ್ ವುಡ್ ಲಾಡ್ಜ್ ಅಂಡ್ ರೆಸಾರ್ಟ್ಸ್, ಸರಾಯ್ ರೆಸಾರ್ಟ್, ಸಂದೇಶ್ ವಾಟರ್ ಎಡ್ಜ್, ಕಾವ್ ರೆಸಾರ್ಟ್, ರೆಡ್ ಅರ್ಥ್, ಡಿಸ್ಕವರಿ ವಿಲೇಜ್, ವೈಲ್ಡ್ ಆರೆಂಜ್ ಕಬಿನಿ, ಕಬಿನಿ ಲೇಖ್ ವೀವ್, ಕಬಿನಿ ಸ್ಪ್ರಿಂಗ್ಸ್, ಫೈರ್ ಫೈಲ್ಸ್ ಸೇರಿದಂತೆ ವಿವಿಧ ರೆಸಾರ್ಟ್ ನ ಸಿಬ್ಬಂದಿಗಳಾದ ಸಲೀಂ, ಷಣ್ಮುಗ, ಮಂಜು, ಶಿವಪ್ಪ, ಚಂದ್ರು, ಸ್ವಾಮಿ, ಮೂರ್ತಿ, ವಿನೋದ್, ಸ್ವಾಮಿ, ಪ್ರತಾಪ್ ಸಿಂಹ, ವಿಜಯಕುಮಾರ್, ದೇವೇಶ್, ಶಿವಪ್ಪ, ಯಶೋಧಮ್ಮ, ರವಿ, ರಾಕಿ, ಮಹೇಶ್, ಗುರುಸ್ವಾಮಿ, ಭೈರ, ನವೀನ್, ಸಿದ್ದು, ಕೃಷ್ಣ, ಚಿಕ್ಕಣ್ಣ, ಪ್ರತಾಪ್, ಅರುಣ್ ಇದ್ದರು.



