ಮೈಸೂರು: ಮುಂದಿನ ಬಜೆಟ್ ಅನ್ನು ನಾನೇ ಮಂಡಿಸುತ್ತೇನೆ. ಮುಖ್ಯಮಂತ್ರಿಯಾಗಿ ಅವಧಿಯನ್ನು ಪೂರ್ಣಗೊಳಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರಬೇಕು. ಶಾಸಕರು, ಸಚಿವರು, ಉಪಮುಖ್ಯಮಂತ್ರಿ ಎಲ್ಲರೂ ಬದ್ಧರಾಗಿರಲೇಬೇಕು ಎಂದು ದೃಢವಾಗಿ ಹೇಳಿದ್ದಾರೆ.
ಕಾಂಗ್ರೆಸ್ ಕೆಲ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವ ಚೆಲುವರಾಯ ಸ್ವಾಮಿ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಹೋಗಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ನಂತರವೂ ನಾನು ಬೇರೆ ಏನನ್ನು ಹೇಳಲಿ ಎಂದು ಪ್ರಶ್ನಿಸಿದರು.
ಸಚಿವ ಚೆಲುವರಾಯಸ್ವಾಮಿ ಜೊತೆ ತಾವು ವಿಡಿಯೋ ಕಾನ್ಫರೆನ್‌್ಸನಲ್ಲಿ ಮಾತನಾಡಿದ್ದೇನೆ. ಅವರು ನಾನು ಕೃಷಿ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ಬಂದಿದ್ದೇನೆ ಎಂದಿದ್ದಾರೆ. ದೆಹಲಿಗೆ ಹೋಗಲೇ ಬಾರದು ಎಂದಿದೆಯೇ ಎಂದರು. ಶಾಸಕರು ದೆಹಲಿಗೆ ಹೋಗಿರುವ ಬಳಿಕವೂ ನೀವೆ ಮುಂದಿನ ಬಜೆಟ್ ಮಂಡಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಷ್ಟು ಮಂದಿ ಹೋಗಿದ್ದಾರೆ. ಯಾರ್ಯಾರು ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ಮುಂದಿನ ಎರಡು ಬಜೆಟ್ ಗಳನ್ನೂ ನೀವೆ ಮಂಡಿಸುತ್ತೀರಾ ಎಂದಾಗ, ಇಂತ ಪ್ರಶ್ನೆಗಳು ಏಕೆ ಬರುತ್ತಿವೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ, ಬಜೆಟ್ ಅನ್ನು ನಾನೇ ಮಂಡಿಸುತ್ತೇನೆ ಎಂದು ಪುನರುಚ್ಚರಿಸಿದರು.
ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನ ರಚನೆ ಕುರಿತು ಹೈಕಮಾಂಡ್ ನಾಯಕರೇ ತೀರ್ಮಾನ ಮಾಡಬೇಕು. ಆದರೆ ಈವರೆಗೂ ಯಾವ ನಾಯಕರು ಹೇಳಿಕೆ ನೀಡಿಲ್ಲ ಎಂದರು. ಈ ಹಿಂದೆಯೂ ಹಲವರು ಇಂತಹ ಮಾತುಗಳನ್ನಾಡಿದರು, ಪ್ರಯತ್ನಗಳು ನಡೆದಿದ್ದವು. ಈಗಲೂ ನಡೆದಿವೆ. ಹೈಕಮಾಂಡ್ ಹೇಳಿದಂತೆ ನಾನು ಕೇಳಬೇಕು, ಡಿಕೆ ಶಿವಕುಮಾರ್ ಕೂಡ ಕೇಳಬೇಕು. ಹೈಕಮಾಂಡ್ ನರವು ಯಾವಾಗ ಹೇಳುತ್ತಾರೆ ಎಂದು ಗೊತ್ತಿಲ್ಲ. ಹೇಳಿದಾಗ ನಾನು ಕೇಳುತ್ತೇನೆ ಎಂದಿದ್ದಾರೆ.
ತಾವು ಕೊಟ್ಟ ಮಾತನ್ನು ತಪ್ಪುವುದಿಲ್ಲ. ಚುನಾವಣೆಯಲ್ಲಿ ಹೇಳಿದಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ ಎಂದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಳೆ ಬೆಂಗಳೂರಿಗೆ ಬರುತ್ತಿದ್ದಾರೆ. ನಾನು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ಸ್ಪಷ್ಟ ಪಡಿಸಿದರು.



