ಬೆಂಗಳೂರು : ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ಆಧಾರ ರಹಿತ ಹೇಳಿಕೆ ನೀಡಿರುವ ಆರೋಪದಡಿ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳವಾರ ಕಾಂಗ್ರೆಸ್ ಪಕ್ಷದ ಯಂಗ್ ಬ್ರಿಗೇಡ್ ಸೇವಾದಳ ಅಧ್ಯಕ್ಷ ಜುನೈದ್ ಪಿ.ಕೆ. ನೇತೃತ್ವದಲ್ಲಿ ವಕೀಲರ ತಂಡ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸೋಮವಾರ(ನ.24) ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ. ಶಾಸಕರಿಗೆ ತಲಾ 50 ಕೋಟಿ ರೂ. ನಗದು, ಒಂದು ಫ್ಲ್ಯಾಟ್ ಹಾಗೂ ಫಾರ್ಚೂನರ್ ಕಾರು ಕೊಡಲಾಗುತ್ತಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ ಮಾತ್ರವಲ್ಲದೆ, ಆಧಾರರಹಿತವಾಗಿದೆ.
ಒಂದು ವೇಳೆ ಈ ರೀತಿಯ ಘಟನೆ ನಡೆದರೆ ಇದು ಭ್ರಷ್ಟಾಚಾರದ ಒಂದು ಭಾಗವಾಗಿದೆ. ಈ ಬಗ್ಗೆ ಪ್ರಚಾರ ಗಿಟ್ಟಿಸಲು ಕಾಂಗ್ರೆಸ್ ಶಾಸಕರ ಕುರಿತು ಇಲ್ಲಸಲ್ಲದ ಆರೋಪ ಮಾಡಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.



