ಮಂಡ್ಯ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗೆಂದು ಪ್ರಾರ್ಥಿಸಿ ಮಳವಳ್ಳಿಯಲ್ಲಿ ತಾಲೂಕಿನ ಒಕ್ಕಲಿಗರ ಸಂಘದಿಂದ ಪೂಜೆ ನೆರವೇರಿಸಲಾಯಿತು.
ಮಂಡ್ಯದ ಮಳವಳ್ಳಿ ಪಟ್ಟಣದ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಅವರ ಹೆಸರಲ್ಲಿ ಅರ್ಚನೆ ಮಾಡಿಸಿದರು. ಅರ್ಚನೆಯ ಮೂಲಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿದರು. ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವಿಪಿ ನಾಗೇಶ್ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿತು. ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಂದು ಘೋಷಣೆ ಕೂಗಿದರು.
ಡಿಕೆ ಶಿವಕುಮಾರ್ ನಿರಂತರವಾಗಿ ಪಕ್ಷಕ್ಕೆ ದುಡಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಅಂತಹ ಮಹಾನ್ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು. ಗ್ರಾ.ಪಂ.ಗಳಲ್ಲಿ ಮೂರು, 6 ತಿಂಗಳಲ್ಲಿ ಅಧ್ಯಕ್ಷರು ಬದಲಾವಣೆ ಆಗುತ್ತಾರೆ. ಸಿದ್ದರಾಮಯ್ಯ ಎರಡೂವರೆ ವರ್ಷ ಪೂರೈಸಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲಿ. ಮೇಕೆದಾಟು ಯೋಜನೆ ಕನಸು ಕಂಡು ಹೋರಾಟ ಮಾಡಿದ್ದರು. ಬೆಂಗಳೂರಿನ ಜನರಿಗೆ ಕುಡಿಯುವ ನೀರನ್ನು ಮತಷ್ಟು ಒದಗಿಸಲು ಮೇಕೆದಾಟು ಯೋಜನೆ ಜಾರಿಯಾಗಲಿ. ಡಿ.ಕೆ.ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ತಾಲೂಕು ಒಕ್ಕಲಿಗ ಸಂಘಟನೆ ಆಗ್ರಹಿಸಿದೆ.
ಇದೇ ವೇಳೆ ಬಿ.ಎಂ.ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ರಾಮಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.



