ಹುಣಸೂರು : ನಗರದ ಪ್ಯಾರಾ ಮೆಡಿಕಲ್ ಹಲವಾರು ಯುವಕ,ಯುವತಿಯರಿಗೆ ಪದವಿಯ ಜೊತೆಗೆ ಉದ್ಯೋಗಾವಕಾಶ ನೀಡಿರುವುದು ಶ್ಲಾಘನೀಯವೆಂದು ರೋಟರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ತಿಳಿಸಿದರು.
ನಗರದ ಪ್ಯಾರಾ ಮೆಡಿಕಲ್ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗಬೇಡಿ. ಕಲಿಕೆಯ ಸಂದರ್ಭದಲ್ಲಿ ನಿಮ್ಮ ನಡವಳಿಕೆ, ವಿನಯ ನಮ್ರತೆಯನ್ನು ಮೈಗೂಡಿಸಿಕೊಂಡು ಮುನ್ನೆಡೆದರೆ ನಿಮ್ಮ ಗುರಿ ತಲುಪಲು ಸಾಧ್ಯವೆಂದರು.
ರಂಗಭೂಮಿ ಕಲಾವಿದ ಹಾಗೂ ಚಲನ ಚಿತ್ರನಟ ಕುಮಾರ್ ಅರಸೇಗೌಡ ಮಾತನಾಡಿ, ಬಾಹುಸಾರ್ ನರ್ಸಿಂಗ್ ಹೋಮ್ ಸೇವೆಯ ಜತೆಗೆ ತಾಲೂಕಿನ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ಡಿಪ್ಲೊಮಾ ಕೋರ್ಸ್ ಮೂಲಕ ಲ್ಯಾಬ್ ಟೆಕ್ನಿಕಲ್ ಜಾಬ್ ಕಲಿಕೆಗೆ ಮುಂದಾಗುವ ಮಕ್ಕಳಿಗೆ ದಾರಿ ದೀಪವಾಗಿರುವ ಸಂಸ್ಥೆಯ ಕಾರ್ಯ ಇನ್ನೂ ಹೆಚ್ಚಾಗಲಿ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಕನ್ನಡ ಭಾಷೆಯ ಸ್ಥಾನಮಾನಕ್ಕೆ, ಸಾಹಿತಿಗಳು, ಕವಿಗಳು, ಕನ್ನಡ ಪರ ಹೋರಾಟದ ಫಲವಾಗಿ ಇಂದು ಕನ್ನಡ ಭಾಷೆ ವಿಶ್ವದೆತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಆ ನಿಟ್ಟಿನಲ್ಲಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೂ ಕೂಡ ಸಾಗಿದರೆ ಕನ್ನಡ ಬೆಳೆಯಲಿದೆ ಎಂದರು.
ಸಂಸ್ಥೆಯ ಉಪನ್ಯಾಸಕ ಚಂದ್ರಶೇಖರ್ ಮಾತನಾಡಿ, ನಿಮ್ಮ ಜೀವನ ಉತ್ತುಂಗಕ್ಕೆ ಏರಬೇಕಾದರೆ, ಓದುವ ದಿಶೆಯಲ್ಲಿ ಶಿಸ್ತು ಮತ್ತು ಶ್ರದ್ಧೆಯಿಂದ ಹಗಲು ರಾತ್ರಿ ಶ್ರಮಿಸಿದರೆ ನಿಮ್ಮ ಕನಸು ನನಸಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ಯಾರಾಮೆಡಿಕಲ್ ಮುಖ್ಯಸ್ಥೆ ಡಾ.ಸರೋಜಿನಿ ವಿಕ್ರಂ, ಡಾ.ಚಂದ್ರನಂದನ್, ಪ್ರಾಂಶುಪಾಲೆ ಡಾ.ರಾಜೇಶ್ವರಿ, ಇನ್ನರ್ ವ್ಹೀಲ್ ಅಧ್ಯಕ್ಷೆ ಜ್ಯೋತಿ ವಿಶ್ವನಾಥ್, ಇನ್ನರ್ ವ್ಹೀಲ್ ಸದಸ್ಯೆರಾದ ಸ್ಮಿತಾ ದಯಾನಂದ್, ಜಯಲಕ್ಷ್ಮಿ ಶಿವಕುಮಾರಿ ಇದ್ದರು.



