ಕೆ ಆರ್ ಪೇಟೆ: ಉತ್ತಿ, ಬಿತ್ತಿ ತನ್ನ ಶ್ರಮದ ದುಡಿಮೆಯ ಮೂಲಕ ಬೇಸಾಯ ಮಾಡಿ ದೇಶದ ಜನತೆಗೆ ಉಣ್ಣಲು ಆಹಾರ ನೀಡುತ್ತಿರುವ ಅನ್ನದಾತನಾದ ರೈತನ ಬದುಕು ಇಂದು ಸಂಕಷ್ಠದಲ್ಲಿದೆ.
ಒಕ್ಕಲಿಗ ಬಂಧುಗಳು ವೈಜ್ಞಾನಿಕವಾಗಿ ಬೇಸಾಯ ಮಾಡಿ ಕೃಷಿಯನ್ನು ಲಾಭದಾಯಕ ಉದ್ಯಮ ವನ್ನಾಗಿಸಿಕೊಳ್ಳಬೇಕು ಎಂದು ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆಹೊಸಳ್ಳಿ ಜವರಾಯಿಗೌಡ ಕರೆ ನೀಡಿದರು. ಅವರು ಪಟ್ಟಣದ ಐ.ಸಿ.ಬಸವರಾಜು ಕಲ್ಯಾಣ ಮಂಟಪದಲ್ಲಿ ನಡೆದ ತಾಲ್ಲೂಕು ಒಕ್ಕಲಿಗರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಒಕ್ಕಲಿಗರು ಮೋಸ, ತಳುಕು ವಂಚನೆ ಗೊತ್ತಿಲ್ಲದ ಮುಗ್ಧ ಜನರಾಗಿದ್ದಾರೆ. ಭೂಮಿ ತಾಯಿಯನ್ನು ನಂಬಿ ಬೆವರು ಸುರಿಸಿ ತಮ್ಮ ಶ್ರಮದ ದುಡಿಮೆಯ ಮೂಲಕ ದೇಶದ ಜನತೆಗೆ ಅನ್ನವನ್ನು ನೀಡುತ್ತಿರುವ ರೈತಾಪಿ ವರ್ಗದ ಜನತೆಯ ಬದುಕು ಇಂದು ಸಂಕಷ್ಢದಲ್ಲಿದೆ.
ರೈತ ಬೆಳೆದ ಬೆಳೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವೈಜ್ಞಾನಿಕವಾಗಿ ಬೆಲೆ ನಿಗಧಿಪಡಿಸುವ ಮೂಲಕ ಬೇಸಾಯದಿಂದ ನಷ್ಠ ಹೊಂದಿ ಸಾಲದ ಭಾಧೆಯಿಂದ ನೊಂದು ಆತ್ಮಹತ್ಯೆಯ ಹಾದಿ ತುಳಿಯುತ್ತಿರುವ ರೈತರ ನೆರವಿಗೆ ಧಾವಿಸಿ ಬರಬೇಕು ಎಂದು ಮನವಿ ಮಾಡಿದ ಜವರಾಯಿಗೌಡ ಒಕ್ಕಲಿಗ ಬಂಧುಗಳು ಸಂಘಟಿತರಾಗಿ ತಮಗೆ ಸಂವಿಧಾನ ಬದ್ಧವಾಗಿ ದೊರೆಯಲೇಬೇಕಾದ ಸವಲತ್ತುಗಳನ್ನು ಪಡೆಯಲು ಸಂಘಟಿತರಾಗಿ ಹೋರಾಟ ನಡೆಸಬೇಕು.
ಏನೇ ಕಷ್ಟ ಬಂದರೂ ಎದೆಗುಂದದೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಧನೆ ಮಾಡುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಾಯಸಮುದ್ರ ಆರ್.ಎಸ್.ಶಿವರಾಮೇಗೌಡ ಮಾತನಾಡಿ ಒಕ್ಕಲಿಗ ಸಮಾಜದ ಬಂಧುಗಳು ಕಡ್ಡಾಯವಾಗಿ ಸಂಘದ ಷೇರುದಾರರಾಗುವ ಮೂಲಕ ಸಂಘದ ಬಲವರ್ಧನೆಗೆ ಮುಂದಾಗಬೇಕು.
ಪ್ರಸ್ತುತ ಇರುವ ಷೇರು ಧನವನ್ನು ಮುನ್ನೂರು ರೂಗಳಿಂದ ಒಂದು ಸಾವಿರ ರೂಪಾಯಿಗೆ ಪರಿಷ್ಕರಿಸುತ್ತಿರುವುದರಿಂದ ಸಂಘದ ಷೇರುದಾರರು ಹೆಚ್ಚುವರಿಯಾಗಿ ಏಳು ನೂರು ರೂಪಾಯಿ ಪಾವತಿಸಿ ಷೇರುಗಳನ್ನು ಪರಿಷ್ಕರಿಸಿಕೊಳ್ಳುವ ಜೊತೆಗೆ ಹೊಸದಾಗಿ ಒಂದು ಸಾವಿರ ರೂಪಾಯಿ ಪಾವತಿಸಿ ಷೇರುಗಳನ್ನು ಪಡೆಯುವಂತೆ ಸಮಾಜದ ಬಂಧುಗಳ ಮನವೊಲಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಆರ್.ಭರತ್ ಕುಮಾರ್ ಹಾಗೂ ಸಂಘದ ವಿಶ್ರಾಂತ ಕಾರ್ಯದರ್ಶಿ ನಾಗೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ರೈತ ಮುಖಂಡ ಬ್ಯಾಲದಕೆರೆ ನಂಜಪ್ಪ, ಈರಪ್ಪಗೌಡ, ಪತ್ರಕರ್ತ ಬಳ್ಳೇಕೆರೆ ಮಂಜುನಾಥ್, ರೈತನಾಯಕಿ ಶೃತಿ, ಮಂಜುಳಾ ಚನ್ನಕೇಶವ ಮಾತನಾಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಎಂ.ಬಿ.ತಿಮ್ಮೇಗೌಡ, ಸಹಕಾರ್ಯದರ್ಶಿ ಎಸ್.ಬಿ.ಬಸವರಾಜು, ಉಪಾಧ್ಯಕ್ಷ ಎಂ.ಬಿ.ಚಂದ್ರಶೇಖರ್, ಕಾನೂನು ಸಲಹೆಗಾರ ಎಂ.ಆರ್.ಪ್ರಸನ್ನಕುಮಾರ್, ಆಡಳಿತ ಮಂಡಳಿಯ ನಿರ್ದೇಶಕರಾದ ಜವರಾಯಿಗೌಡ, ಚನ್ನಿಂಗೇಗೌಡ, ಎಸ್.ಕೆ.ರಾಮಕೃಷ್ಣೇಗೌಡ, ಎಂ.ವಿ.ನಾಗೇಗೌಡ, ವಸಂತಕುಮಾರ್, ಐ.ಸಿ.ಬಸವರಾಜು, ಎ.ಟಿ.ನಾಗರಾಜು, ಹೆಚ್.ಎಂ.ಶಿವರಾಮು, ಎಸ್.ಕೃಷ್ಣೇಗೌಡ, ಗೊರವಿ ಶ್ರೀಧರ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.



