ಮಂಗಳೂರು (ದಕ್ಷಿಣ ಕನ್ನಡ): ಕೌಟುಂಬಿಕ ಕಾರಣದಿಂದ ಮನನೊಂದು ಅಮಲು ಪದಾರ್ಥದೊಂದಿಗೆ ಇಲಿಪಾಷಾನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಕಡಬದ ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ನಿವಾಸಿ ರಾಕೇಶ್ (36) ಮೃತ ಯುವಕ.
ಕಡಬದ ಕಳಾರ ಎಂಬಲ್ಲಿ ದ್ವಿಚಕ್ರ ವಾಹನಗಳ ಗ್ಯಾರೇಜ್ ಇಟ್ಟುಕೊಂಡಿದ್ದ ರಾಕೇಶ್ ರ ಪತ್ನಿಯೊಂದಿಗೆ ಆತನ ಗೆಳೆಯನೊಬ್ಬ ಮೊಬೈಲ್ ಮೂಲಕ ಸಂಪರ್ಕದಲ್ಲಿರುವ ವಿಷಯ ತಿಳಿದ ರಾಕೇಶ್ ನು ತೀವ್ರವಾಗಿ ಬೇಸರಗೊಂಡು ದಿನಾಂಕ: 19-11-2025 ರ ಸಂಜೆ ಕಡಬ ಬಜಾಜ್ ಶೋ ರೂಂ ಹಿಂದುಗಡೆ ಅಮಲು ಪದಾರ್ಥದೊಂದಿಗೆ ಇಲಿಪಾಷಾನ ಸೇವಿಸಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದರು. ಕೂಡಲೇ ಅಲ್ಲಿದ್ದವರು ರಾಕೇಶ್ ನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ರಾಕೇಶ್ ದಿನಾಂಕ:26-11-2025 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ದಿನಾಂಕ 26.11.2025 ರಂದು ಕಡಬ ಪೊಲೀಸು ಠಾಣೆಯಲ್ಲಿ ಯುಡಿಆರ್ ನಂ: 35/2025 ಕಲಂ:194 (3) (iv) BNSS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



