Friday, November 28, 2025
Google search engine

Homeರಾಜ್ಯನವ ಸಂಕಲ್ಪಗಳನ್ನು ಪಾಲಿಸುವಂತೆ ಪ್ರಧಾನಿ ಮೋದಿ ಕರೆ

ನವ ಸಂಕಲ್ಪಗಳನ್ನು ಪಾಲಿಸುವಂತೆ ಪ್ರಧಾನಿ ಮೋದಿ ಕರೆ

ಉಡುಪಿ : ನದಿ ಸಂರಕ್ಷಣೆ, ಅಮ್ಮನ ಹೆಸರಿನಲ್ಲಿ ಮರಗಳ ರಕ್ಷಣೆ, ಓರ್ವ ಬಡವನ ಉದ್ಧಾರ, ವೋಕಲ್ ಫಾರ್ ಲೋಕಲ್, ಸಾವಯವ ಕೃಷಿ, ಧಾನ್ಯಗಳ ಹೆಚ್ಚಿನ ಬಳಕೆ, ಊಟದಲ್ಲಿ ಎಣ್ಣೆಯ ಅಂಶ ಕಡಿಮೆ ಮಾಡುವುದು ಸೇರಿದಂತೆ ಒಟ್ಟು 9 (ನವ) ಸಂಕಲ್ಪಗಳನ್ನು ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಶುಕ್ರವಾರ ಉಡುಪಿಯಲ್ಲಿ ಲಕ್ಷ ಕಂಠ ಗೀತಾ ಪಠನ ಯಜ್ಞದಲ್ಲಿ ಭಾಗವಹಿಸಿದ ಬಳಿಕ ಅವರು ಜನರನ್ನುದ್ದೇಶಿಸಿ ಮಾತನಾಡಿದರು.

ಇದೇ ವೇಳೆ ಅವರು ಜನಸಂಘ ಹಾಗೂ ಉಡುಪಿಯ ಹಿಂದಿನ ಶಾಸಕ ವಿಎಸ್ ಆಚಾರ್ಯರನ್ನು ಸ್ಮರಿಸಿದರು. ಉಡುಪಿಯಲ್ಲಿ 5 ದಶಕದ ಹಿಂದೆಯೇ ಜನ ಸಂಘಕ್ಕೆ ಅಧಿಕಾರ ಸಿಕ್ಕಿತ್ತು. ಉಡುಪಿ ಬಿಜೆಪಿ ಮತ್ತು ಜನಸಂಘದ ಕರ್ಮಭೂಮಿ ಎಂದು ಅವರು ತಿಳಿಸಿದರು. ಬಿಜೆಪಿಗೆ ಇಲ್ಲಿನ ಮುಖಂಡ ವಿ.ಎಸ್. ಆಚಾರ್ಯ ಅವರ ಕೊಡುಗೆ ಬಹಳಷ್ಟಿದೆ ಎಂದು ನೆನೆದರು. ಇಂದು ನನಗೆ ಉಡುಪಿ ಶ್ರೀಕೃಷ್ಣ ಮತ್ತು ಮಧ್ವಾಚಾರ್ಯರ ಆಶೀರ್ವಾದ ಸಿಕ್ಕಿದೆ. ಉಡುಪಿ ಮಠದಲ್ಲಿ ಲಕ್ಷ ಕಂಠ ಗೀತಾ ಪಠಣ ನಡೆದಿದೆ. ಇದರಲ್ಲಿ ಭಾಗಿಯಾಗಿದ್ದು ನನ್ನ ಪರಮ ಸೌಭಾಗ್ಯ. ಉಡುಪಿಗೆ ಬರುವುದೆಂದರೆ ನನಗೆ ಬಹಳ ಸಂತಸದ ವಿಚಾರ ಎಂದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ʼಜೈ ಶ್ರೀಕೃಷ್ಣʼ ಎಂದು ಮೂರು ಬಾರಿ ಘೋಷಣೆ ಮೊಳಗಿಸಿ ʼಎಲ್ಲರಿಗೂ ನಮಸ್ಕಾರʼ ಎಂದು ಕನ್ನಡದಲ್ಲಿ ಹೇಳಿ ಬಳಿಕ ಹಿಂದಿಯಲ್ಲಿ ಮಾತು ಮುಂದುವರಿಸಿದರು.

ನನ್ನ ಜನ್ಮ ಗುಜರಾತ್ ನಲ್ಲಿ ಆಗಿದೆ. ಗುಜರಾತ್ ಹಾಗೂ ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆತ್ಮೀಯ, ಆಧ್ಯಾತ್ಮಿಕ ಖುಷಿ ನೀಡಿದೆ. ಉಡುಪಿ ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಲಕ್ಷ ಕಂಠದ ಮೂಲಕ ಗೀತಾದ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರುವುದು ಹೊಸ ಶಕ್ತಿ ನೀಡಿದೆ. ಉಡುಪಿಯಲ್ಲಿ ಧರ್ಮ ಮತ್ತು ಸೇವೆ ಸಂಗಮವಿದೆ. ಲಕ್ಷಾಂತರ ಭಕ್ತರಿಗೆ ಇಲ್ಲಿ ಅನ್ನ ದಾಸೋಹ ನಡೆಯುತ್ತಿದೆ. ದಾಸರ ಪದಗಳು ಕನ್ನಡಿಗರ ಮನೆ ಮನದಲ್ಲಿದೆ ಎಂದು ಹೇಳುವ ಮೂಲಕ ಪುರಂದರ ದಾಸ ಮತ್ತು ಕನಕ ದಾಸರನ್ನು ಸ್ಮರಿಸಿದರು.

ಮೂರು ದಿನದ ಹಿಂದೆ ನಾನು ಅಯೋಧ್ಯೆಯಲ್ಲಿ ಇದ್ದೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಧರ್ಮಧ್ವಜ ಸ್ಥಾಪನೆ ಆಗಿದೆ. ಇದಕ್ಕೆ ಅಯೋಧ್ಯೆಯಿಂದ ಉಡುಪಿಯವರೆಗೂ ರಾಮ ಭಕ್ತರು ಸಾಕ್ಷಿಯಾಗಿದ್ದಾರೆ ಎಂದು ಮೋದಿ ಬಣ್ಣಿಸಿದರು. ಉಡುಪಿಯಲ್ಲಿ ಮಧ್ವಾಚಾರ್ಯರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ.

ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಧರ್ಮಕಾರ್ಯದಲ್ಲಿ ತೊಡಗಿವೆ. ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ. ನನ್ನಂತಹ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಯೋಜನೆಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಪಹಲ್ಗಾಮ್ ನಲ್ಲಿ ಕನ್ನಡಿಗರು ಪ್ರಾಣ ತೆತ್ತರು. ಆದರೆ ನವಭಾರತ ಯಾರ ಮುಂದೆಯೂ ತಲೆಬಾಗಲ್ಲ. ನಮಗೆ ಶಾಂತಿ ಸ್ಥಾಪನೆಯೂ ಗೊತ್ತು, ರಕ್ಷಣೆಯೂ ಗೊತ್ತು. ಮಹಿಳೆಯರು, ನಾಗರಿಕರ ರಕ್ಷಣೆ ನಮ್ಮ ಹೊಣೆ ಎಂದು ನುಡಿದರು.

RELATED ARTICLES
- Advertisment -
Google search engine

Most Popular