ರಾಮನಗರ :ವ್ಯಸನಗಳಿಂದ ಆರ್ಥಿಕವಾಗಿ ನಷ್ಠಕ್ಕೊಳಗಾಗದಲ್ಲದೇ ಹಲವಾರು ರೋಗರುಜಿನಗಳು ದೇಹಕ್ಕೆ ಅಂಟಿಕೊoಡು ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ದುರ್ಬಲರಾಗುತ್ತಾರೆ. ಜೊತೆಗೆ ಸಮಾಜವು ಕೂಡ ಕೀಳಾಗಿ ಕಾಣುತ್ತದೆ. ಆ ಕಾರಣಕ್ಕಾಗಿ ವ್ಯಸನಗಳ ದಾಸರಾಗದೇ ವ್ಯಸನ ಮುಕ್ತ ಸಮಾಜ ಕಟ್ಟಲು ಸಹಕರಿಸಿ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ನಾಗವೇಣಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಶಾಂತಿನಿಕೇತನ ಗ್ರೂಪ್ ಆಫ್ ಇನ್ಸ್ಟ್ಯೂಟ್ ಅವರ ಸಂಯುಕ್ತಾಶ್ರಯದಲ್ಲಿ ಡಾ. ಮಹಾಂತ ಶಿವಯೋಗಿ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ವ್ಯಾಪಾರೀಕರಣವು ಸಂಪೂರ್ಣ ಯುವಕರ ಮೇಲೆ ನಿಂತಿದೆ. ಅವರೇ ವ್ಯಸನಿಗಳಾದರೆ ದೇಶದ ಅರ್ಥವ್ಯವಸ್ಥೆಗೆ ತೊಂದರೆಯಾಗಲಿದೆ. ಮಾದಕ ವಸ್ತುಗಳ ಮೇಲೆ ಹಾನಿಕಾರಕ ಎಂಬ ಮಾಹಿತಿ ಇದ್ದರು ಸಹಿತ ಅದರಿಂದ ಯುವಜನತೆ ದೂರವಾಗದಿರುವುದು ವಿಷಾದನೀಯ ಸಂಗತಿ. ಇದರಿಂದ ದೇಶದಲ್ಲಿ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿವೆ. ಆದ್ದರಿಂದ ಯುವಕರು ವ್ಯಸನಗಳನ್ನು ದೂರವಿಟ್ಟು, ಸ್ವಚ್ಛಂದ ಸಮಾಜ ನಿರ್ಮಾಣಕ್ಕೆ ಯುವಕರು ಸನ್ನದ್ಧರಾಗಬೇಕು ಎಂದರು.
ರಾಜ್ಯದಲ್ಲಿ ರಾಮನಗರ ಜಿಲ್ಲೆಯು ಅತಿ ಹೆಚ್ಚು ವ್ಯಸನ ಸೇವನೆಯ ಜಿಲ್ಲೆಯಾಗಿ ಗುರುತಿಸಿಕೊಂಡಿರುವುದು ಆತಂಕಕಾರಿ ಸಂಗತಿಯಾಗಿದೆ. ಆದ್ದರಿಂದ ಯುವಕರು ವ್ಯಸನವನ್ನು ತ್ಯಜಿಸಿ, ತಮ್ಮ ಅಕ್ಕಪಕ್ಕದವರಿಗೆ ವ್ಯಸನ ಸೇವನೆಯಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿ ರಾಮನಗರ ಜಿಲ್ಲೆಯನ್ನು ವ್ಯಸನಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಿ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಮಾತನಾಡಿ, ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು ಎಂದು ತಿಳಿಸಿದರು.
ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ವ್ಯಕ್ತಿ, ಕುಟುಂಬ, ಸಮಾಜ ಗ್ರಾಮಗಳ ನಿರ್ಮಾಣ ಮಾಡುವ ಜೊತೆಗೆ ತಮ್ಮ ಜೋಳಿಗೆ ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವೈದ್ಯರು, ಸಮಾಜ ವಿಜ್ಞಾನಿಗಳು, ಸಾಹಿತಿಗಳು, ಸಮಾಜ ಕಳಕಳಿಯ ಕವಿಗಳು, ಧರ್ಮ ಗುರುಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಮೂಡಿಸುವ ಮೂಲಕ ವ್ಯಸನಗಳ ಮನಪರಿವರ್ತನೆ ಮಾಡುವುದರ ಜೊತೆಗೆ ಮಕ್ಕಳು, ವಿದ್ಯಾರ್ಥಿಗಳು, ಯುವ ಜನಾಂಗ ಇಂತಹ ಚಟಗಳಿಗೆ ಬಲಿಯಾಗದಂತೆ ಅರಿವು ಮೂಡಿಸುತ್ತಿದ್ದರು. ಇದರಿಂದಾಗಿ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವ ಸಾಗಿಸುತ್ತಿವೆ ಎಂದರು.
ಮನೋರೋಗ ತಜ್ಞರಾದ ಡಾ. ಗೋವಿಂದಸ್ವಾಮಿ ಅವರು ವ್ಯಸನಕ್ಕೆ ಒಳಗಾಗಿರುವವರು ವ್ಯಸನದಿಂದ ಪಾರಾಗಲು ಜಿಲ್ಲಾ ಆಸ್ಪತ್ರೆಯಲ್ಲಿರುವ ಮನೋರೋಗ ತಜ್ಞರ ವಿಭಾಗಕ್ಕೆ ಭೇಟಿನೀಡಿ ಚಿಕಿತ್ಸೆ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸುವಂತೆ ಹಾಗೂ ಯುವ ಜನತೆಯು ವ್ಯಸನವನ್ನು ತ್ಯಜಿಸಿ ಆರೋಗ್ಯಕರವಾಗಿರುವಂತೆ ತಿಳಿಸಿದರು ಹಾಗೂ ವ್ಯಸನದ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ವ್ಯಸನ ಮುಕ್ತಗೊಳಿಸುವ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಭೌರವ ಅವರು ನಾಡಗೀತೆ ಪ್ರಸ್ತುತ ಪಡಿಸಿದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಸಿದರು.
ಇದೇ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ, ಶಾಂತಿನಿಕೇತನ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
