ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇದೇ ವೇಳೆ ಬ್ರೇಕ್ ಫಾಸ್ಟ್ ಮೀಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ. ಕಳೆದ ಮೂರ್ನಾಲ್ಕು ದಿನದ ಹಿಂದೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜನೆ ಮಾಡಲಾಗಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ಗೆ ಆಗಮಿಸಿದ್ದರು.
ಇದೀಗ ಇಂದು ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಡಿಕೆಶಿ ನಿವಾಸದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಆಗಮಿಸಿ ಬ್ರೇಕ್‌ಫಾಸ್ಟ್‌ನಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಇಡ್ಲಿ ಮತ್ತು ನಾಟಿ ಕೋಳಿ ಸಾಂಬಾರ್ ಸವಿದರೆ, ಡಿ.ಕೆ ಶಿವಕುಮಾರ್ ನಾನ್‌ವೆಜ್ ಮುಟ್ಟಿಲ್ಲವಂತೆ ಎಂಬುದು ತಿಳಿದು ಬಂದಿದೆ.
ಈ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಡಿ.ಕೆ ಶಿವಕುಮಾರ್ ಸಹೋದರ, ಸಂಸದ ಡಿ.ಕೆ. ಸುರೇಶ್ ಮತ್ತು ಮಂಡ್ಯ ಜಿಲ್ಲೆಯ ಶಾಸಕ ಕೆ.ಎಂ. ರಂಗನಾಥ್ ಭಾಗಿಯಾಗಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತ್ರ ನಾನ್‌ವೆಜ್ ತಿಂದಿದ್ದಾರಂತೆ. ಇಡ್ಲಿ ಮತ್ತು ನಾಟಿ ಕೋಳಿ ಸಾಂಬಾರ್ ಸವಿದಿದ್ದು, ಇತ್ತ ನಾನ್‌ವೆಜ್ ಮುಟ್ಟದ ಡಿ.ಕೆ ಶಿವಕುಮಾರ್ ಇಡ್ಲಿ, ಚಟ್ನಿ, ವೆಜ್ ಸಾಂಬಾರ್ ಹಾಗೂ ಫ್ರೂಟ್ ಸಲಾಡ್‌ಗೆ ಮಾತ್ರ ಸೀಮಿತರಾದರು ಎನ್ನಲಾಗಿದೆ.
ಕಳೆದ ಹಲವು ದಿನಗಳಿಂದ ನಾನ್‌ವೆಜ್ ಸಂಪೂರ್ಣ ಬಿಟ್ಟಿರುವ ಡಿಕೆಶಿ ತಮ್ಮ ಆರೋಗ್ಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಉಲ್ಲೇಖಿಸಿ ವೆಜ್ ಆಹಾರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ನಡುವೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮತ್ತು ಡಿಕೆ ಸುರೇಶ್ ಅವರ ನಡುವೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗಿದ್ದು, ಪಕ್ಷದ ಒಳಗಿನ ವಿಚಾರಗಳು, ಮುಂದಿನ ಚುನಾವಣೆಗಳು, ಲೋಕಸಭಾ ಚುನಾವಣಾ ತಯಾರಿ, ಸಂಪುಟ ಪುನರಚನೆ, ಹೈಕಮಾಂಡ್ ವಿಶ್ವಾಸ ಸೇರಿದಂತೆ ಹಲವು ವಿಷಯಗಳ ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಸಮಯದಲ್ಲಿ ಮದ್ದೂರು ಶಾಸಕ ಕದಲೂರು ಉದಯ್ ಡಿಕೆಶಿ ಅವರ ನಿವಾಸಕ್ಕೆ ಆಗಮಿಸಿದ್ದು, ಕೆಲವು ತಿಂಗಳುಗಳ ಹಿಂದೆಯಷ್ಟೇ “ಡಿಕೆಶಿಗೆ ಸಿಎಂ ಪಟ್ಟ ಬೇಕು” ಎಂದು ದೆಹಲಿ ಪರ್ಯಂತ ಪ್ರಯಾಣ ಮಾಡಿ ಒತ್ತಡ ಹೇರಿದ್ದ ಉದಯ್ ಇಂದು ವಿಧಾನಸೌಧದಲ್ಲಿ ನಡೆಯಲಿರುವ ಮದ್ದೂರು-ಮಳವಳ್ಳಿ ರಸ್ತೆ ಅಗಲೀಕರಣ ಸಂಬಂಧಿಸಿದ ಸಭೆಗೆ ಸಂಬಂಧಿಸಿದಂತೆ ಡಿಕೆಶಿ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಈ ಸಭೆ ನಡೆಯಲಿದ್ದು, ರಸ್ತೆ ಅಗಲೀಕರಣಕ್ಕೆ ಅಗತ್ಯವಾದ ಹಣ ಬಿಡುಗಡೆ ಮಾಡುವ ಬಗ್ಗೆ ಚರ್ಚೆಯಾಗಲಿದೆ. ಉಪಹಾರದ ನಂತರ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಮನೆಯಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಕಾಂಗ್ರೆಸ್ ಒಳಗಿನ ಸಿಎಂ ರೇಸ್ ಸದ್ದು ಇನ್ನೂ ತಣ್ಣಗಾಗದ ನಡುವೆ ಸಿಎಂ ಮತ್ತು ಡಿಸಿಎಂ ಅವರ ಈ ಉಪಹಾರ ಭೇಟಿ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. “ಇಡ್ಲಿ-ನಾಟಿ ಕೋಳಿ ಸಾಂಬಾರ್ ಜೊತೆ ರಾಜಕೀಯ ಚರ್ಚೆಯೂ ನಡೆದಿರಬಹುದು” ಎಂದು ಪಕ್ಷದ ಹಿರಿಯರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದು, ಎರಡೂ ನಾಯಕರು ಇದು ಸೌಹಾರ್ದಯುತ ಭೇಟಿ, ಯಾವುದೇ ರಾಜಕೀಯ ಚರ್ಚೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ, ಡಿಕೆಶಿ ಮನೆಯಲ್ಲಿ ನಡೆದ ಈ ಬ್ರೇಕ್‌ಫಾಸ್ಟ್ ಭೇಟಿ ಕಾಂಗ್ರೆಸ್ ಒಳಗಿನ ಗದ್ದಲದ ಬಗ್ಗೆ ಅನೇಕ ಚರ್ಚೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.



