Saturday, January 17, 2026
Google search engine

Homeರಾಜ್ಯಸುದ್ದಿಜಾಲಹೆಚ್ಚುವರಿಯಾಗಿ ಪಾವತಿಸಿದ ಹಣದ ಲೆಕ್ಕ ಕೊಡಿ : ಸರ್ಕಾರಕ್ಕೆ ವಿಜಯ್ ಮಲ್ಯ ಪ್ರಶ್ನೆ

ಹೆಚ್ಚುವರಿಯಾಗಿ ಪಾವತಿಸಿದ ಹಣದ ಲೆಕ್ಕ ಕೊಡಿ : ಸರ್ಕಾರಕ್ಕೆ ವಿಜಯ್ ಮಲ್ಯ ಪ್ರಶ್ನೆ

ಲಂಡನ್ : ಹಲವು ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ, ಲಂಡನ್ ನಲ್ಲಿ ನೆಲೆಸಿರುವ ಮಾಜಿ ರಾಜ್ಯಸಭಾ ಸದಸ್ಯ ಮತ್ತು ಯುಬಿ ಸಂಸ್ಥೆಯ ಅಧ್ಯಕ್ಷ ವಿಜಯ್ ಮಲ್ಯ, ಭಾರತದ ಹಣಕಾಸು ಸಚಿವಾಲಯಕ್ಕೆ ಗಂಭೀರ ಪ್ರಶ್ನೆಯನ್ನು ಕೇಳಿದ್ದು, ಈ ಸಂಬಂಧ ಸಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.

ನನ್ನಿಂದ ಹೆಚ್ಚುವರಿಯಾಗಿ ರಿಕವರಿ ಮಾಡಿಕೊಂಡಿರುವ ಹಣದ ಲೆಕ್ಕ ಯಾವಾಗ ಕೊಡುತ್ತೀರಾ ಮತ್ತು ಯಾವಾಗ ಚುಕ್ತಾ ಮಾಡುತ್ತೀರಾ ಎಂದು ವಿಜಯ್ ಮಲ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಲಂಡನ್ ನಲ್ಲಿ ಕೂತು, ಕರ್ನಾಟಕ ಹೈಕೋರ್ಟ್ ನಲ್ಲಿ ವಿಜಯ್ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದು, ಇನ್ನೊಂದು ಕಡೆ ಅವರನ್ನು ಗಡೀಪಾರು ಮಾಡಲು, ಕಾನೂನು ಹೋರಾಟ ನಡೆಯುತ್ತಿದೆ. ಸರ್ಕಾರ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ನನ್ನನ್ನು ಮತ್ತು ಸಾರ್ವಜನಿಕರಿಗೆ ಯಾಕೆ ಮೋಸ ಮಾಡುತ್ತಿದೆ ಎಂದು ವಿಜಯ್ ಮಲ್ಯ ಪ್ರಶ್ನಿಸಿದ್ದು, ಇತ್ತೀಚೆಗೆ ಅವರು ಪೋಡ್ ಕಾಸ್ಟ್ ನಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಕೆಲವು ಗಂಟೆಯ ಕೆಳಗೆ ಟ್ವೀಟ್ (ಎಕ್ಸ್) ಮಾಡಿರುವ ವಿಜಯ್ ಮಲ್ಯ, ” ಕೇಂದ್ರ ಹಣಕಾಸು ಸಚಿವರು ಸಂಸತ್ತಿನಲ್ಲಿ ನನ್ನ ವಿಷಯವನ್ನು ಪ್ರಸ್ತಾಪಿಸುತ್ತಾರೆ. ನನ್ನಿಂದ ಇದುವರೆಗೆ, 14,100 ಕೋಟಿ ರೂಪಾಯಿ ವಸೂಲು ಮಾಡಿರುವುದಾಗಿ ಹೇಳುತ್ತಾರೆ. ಆದರೆ, ಇವರ ಹೇಳಿಕೆಗೂ, ಬ್ಯಾಂಕ್ ಹೇಳಿಕೆಗೂ ವ್ಯತ್ಯಾಸವಿದೆ” ಎಂದು ಎಕ್ಸ್ ಮೂಲಕ ತಿಳಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕುಗಳು ನನ್ನಿಂದ ಹತ್ತು ಸಾವಿರ ಕೋಟಿ ರೂಪಾಯಿ ವಸೂಲಿ ಮಾಡಿರುವುದಾಗಿ ತಿಳಿಸಿವೆ. ಕೇಂದ್ರ ಹಣಕಾಸು ಸಚಿವರು 14,100 ಕೋಟಿ ಎಂದು ಹೇಳುತ್ತಿದ್ದಾರೆ. ಹಾಗಾದರೆ, ನಾಲ್ಕು ಸಾವಿರ ಕೋಟಿ ವ್ಯತ್ಯಾಸಕ್ಕೆ ಕಾರಣವೇನು ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ವಿಜಯ್ ಮಲ್ಯ ಒತ್ತಾಯಿಸಿದ್ದಾರೆ. ಇದೀಗ ಇನ್ನೊಂದು ರೀತಿಯ ಹೇಳಿಕೆಯು ಹಣಕಾಸು ಸಚಿವಾಲಯದಿಂದ ಬರುತ್ತಿದ್ದು, ನಾನು ಇನ್ನೂ ಹತ್ತು ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ.

ಬ್ಯಾಂಕುಗಳು ಏಳು ಸಾವಿರ ಕೋಟಿ ಬಾಕಿ ಎನ್ನುತ್ತಿವೆ. ಇದುವರೆಗೆ ನನ್ನಿಂದ ವಸೂಲು ಮಾಡಿರುವ ದುಡ್ಡಿಗೆ ಯಾವ ಲೆಕ್ಕವನ್ನು ಅಥವಾ ಸ್ಟೇಟ್ಮೆಂಟ್ ನೀಡುತ್ತಿಲ್ಲ ಎಂದು ವಿಜಯ್ ಮಲ್ಯ ಗಂಭೀರವಾಗಿ ಆರೋಪಿಸಿದ್ದಾರೆ. ನಿಜಾಂಶವನ್ನು ತಿಳಿಯಲು ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ ತನಿಖೆ ನಡೆಸಬಾರದೇ? ನನಗೆ ಯಾಕೆ ಈ ರೀತಿಯ ದುರದೃಷ್ಟಕರ ಪರಿಸ್ಥಿತಿ? ಹಣಕಾಸು ಸಚಿವಾಲಯ ಮತ್ತು ಬ್ಯಾಂಕಿನ ಹೇಳಿಕೆಯಲ್ಲಿ ದೊಡ್ಡ ವ್ಯತ್ಯಾಸವಿದ್ದು, ನಾಲ್ಕು ಸಾವಿರ ಕೋಟಿ ವ್ಯತ್ಯಾಸದ ಬಗ್ಗೆ ಸ್ಪಷ್ಟತೆಯಿಲ್ಲ. ಒಂದು ವೇಳೆ ನಾನು ಹೆಚ್ಚುವರಿಯಾಗಿ ಪಾವತಿಸಿದ್ದರೆ, ಅದರ ಸೆಟ್ಲಮೆಂಟ್ ಯಾವಾಗ ಎಂದು ವಿಜಯ್ ಮಲ್ಯ ಪ್ರಶ್ನಿಸಿದ್ದಾರೆ.

ಮೂಲ ತೀರ್ಪಿನ ಪ್ರಕಾರ, 6,203 ಕೋಟಿ ರೂಪಾಯಿ ನಾನು ಪಾವತಿಸಬೇಕಾಗಿತ್ತು. ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಈಗಾಗಲೇ ರಿಕವರಿ ಮಾಡಲಾಗಿದೆ, ಯಾಕೆ ನನ್ನನ್ನು ಈ ರೀತಿ ಹಿಂಡುತ್ತಿದ್ದಾರೆ ಎಂದು ಯುಬಿ ಸಂಸ್ಥೆಯ ಮಾಲೀಕ ವಿಜಯ್ ಮಲ್ಯ ನೋವು ತೋಡಿಕೊಂಡಿದ್ದಾರೆ. ಈ ಬಗ್ಗೆ ಬ್ಯಾಂಕ್‌ ನನಗೆ ಸ್ಟೇಟ್ಮೆಂಟ್ ಆಫ್ ಅಕೌಂಟ್ಸ್ ಅನ್ನು ನೀಡಲು, ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕೆಂದು, ವಿಜಯ್ ಮಲ್ಯ, ಲಂಡನ್ ನಲ್ಲಿ ಕೂತು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

RELATED ARTICLES
- Advertisment -
Google search engine

Most Popular