ಬೆಂಗಳೂರು : ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಆಗಿದೆ. ಎಲ್ಲಾ ಗೊಂದಲಗಳಿಗೆ ಪರಿಹಾರ ಕೊಡುತ್ತದೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ತಿಳಿಸಿದರು. ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿ, ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಏನಾಯ್ತು ಅಂತ ಯಾರ್ ಯಾರ್ ಬ್ರೇಕ್‌ಫಾಸ್ಟ್ ಮಾಡಿದ್ರೋ ಅವರನ್ನ ಕೇಳಿ. ನಿಮಗೆಷ್ಟು ವಿಚಾರ ಗೊತ್ತೋ ನಮಗೂ ಅಷ್ಟೇ ಗೊತ್ತು. ಅವರು ಟಿಫಿನ್ ಮಾಡಿದ್ದು, ಏನ್ ಮಾತಾಡಿದ್ರು ಅವರಿಗೆ ಗೊತ್ತು. ನಮಗೇನು ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಅಂತಿಮವಾಗಿ ಎಲ್ಲಾ ಗೊಂದಲಗಳಿಗೆ ಎಲ್ಲಾದರೂ ಒಂದು ಬ್ರೇಕ್ ಬೀಳಲೇಬೇಕು. ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ. ಹೈಕಮಾಂಡ್ ಎಲ್ಲವನ್ನೂ ಇತ್ಯರ್ಥ ಮಾಡುತ್ತದೆ. ಹೈಕಮಾಂಡ್ ನಿರ್ಧಾರ ನಾವು ಒಪ್ಪುತ್ತೇವೆ ಎಂದು ತಿಳಿಸಿದರು. ಅದಲ್ಲದೇ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತ ಈಗಲೂ ಹೇಳ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನೀವು ನನಗೆ ಫುಲ್ ಮೀಲ್ಸ್ ಕೊಡೋಕೆ ಹೊರಟಿದ್ದೀರಾ? ಅನೇಕ ಬಾರಿ ನಾವು ಮಾತಾಡಿದ್ದೇವೆ. ಮತ್ತೆ ಅದನ್ನ ಏನ್ ಮಾತಾಡೋದು. ನಮ್ಮ ಬಾಯಲ್ಲಿ ಯಾಕೆ ಹೇಳಿಸ್ತೀರಾ ಎಂದು ಉತ್ತರಿಸಿದರು.
ಮುಂದುವರೆಸುತ್ತಾ ಸಚಿವ ಸ್ಥಾನ ಕೊಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪಕ್ಷದಲ್ಲಿ ಸೀನಿಯರ್ ಸಿದ್ದರಾಮಯ್ಯನವರ ಜೊತೆಗೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಹಾಗೂ 5 ಬಾರಿ ಗೆದ್ದಿದ್ದೇನೆ. ನನಗೂ ಒಂದು ಅವಕಾಶ ಮಾಡಿಕೊಡಿ ಅಂತ ಕೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.



