ಲಕ್ನೋ : ಭಾರತೀಯ ಪುರಾತತ್ವ ಸಮೀಕ್ಷೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್, ಮಥುರಾ ಮತ್ತು ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಗಳನ್ನು ಮುಸ್ಲಿಮರು ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಸಲಹೆ ನೀಡಿದ್ದು, ಮೆಕ್ಕಾ ಮತ್ತು ಮದೀನಾ ಮುಸ್ಲಿಮರಿಗೆ ಪವಿತ್ರವಾದಂತೆ ಈ ಎರಡು ಸ್ಥಳಗಳು ಹಿಂದೂಗಳಿಗೆ ಪವಿತ್ರವಾಗಿವೆ ಎಂದು ಹೇಳಿದ್ದಾರೆ.
ಈ ಕುರಿತು ಮಂದಿರ-ಮಸೀದಿ ವಿವಾದಗಳಲ್ಲಿ ಸಂಯಮ ವಹಿಸುವಂತೆ ಕರೆ ನೀಡಿದ್ದು, ರಾಮ ಜನ್ಮಭೂಮಿ, ಮಥುರಾ ಮತ್ತು ಜ್ಞಾನವಾಪಿ ಎಂಬ ಮೂರು ಸ್ಥಳಗಳು ಮಾತ್ರ ಚರ್ಚೆಯ ಕೇಂದ್ರಬಿಂದುವಾಗಿರಬೇಕು ಎಂದು ಹೇಳಿದ್ದಾರೆ. ಹಾಗೂ ಮುಸ್ಲಿಮರು ಈ ಸ್ಥಳಗಳನ್ನು ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು ಎಂದು ಅವರು ಸೂಚಿಸಿದ್ದು, ದೇಶದ ಬೇರೆಡೆ ಇದೇ ರೀತಿಯ ಬೇಡಿಕೆಗಳನ್ನು ಎತ್ತದಂತೆ ಕೆ.ಕೆ. ಮುಹಮ್ಮದ್ ಹಿಂದೂಗಳಿಗೆ ಸಲಹೆ ನೀಡಿದ್ದಾರೆ.
ಈ ವೇಳೆ ದೇಶಾದ್ಯಂತ ದೇವಾಲಯ-ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಲವಾರು ಅರ್ಜಿಗಳು ನ್ಯಾಯಾಲಯಗಳಲ್ಲಿ ಬಾಕಿ ಇರುವಾಗ ಮುಹಮ್ಮದ್ ಅವರ ಈ ಹೇಳಿಕೆಗಳು ಬಂದಿದ್ದು, ಅಯೋಧ್ಯಾ ವಿವಾದವು ಎಡಪಂಥೀಯ ಪ್ರಚಾರದ ಉತ್ಪನ್ನವಾಗಿದೆ ಎಂದು ಹೇಳಿದ್ದಾರೆ.
ಅಯೋಧ್ಯಾ ವಿವಾದದ ಕುರಿತು ಮಾತನಾಡುತ್ತಾ, 1976 ರಲ್ಲಿ ಪ್ರೊ. ಬಿ.ಬಿ. ಲಾಲ್ ನೇತೃತ್ವದಲ್ಲಿ ಬಾಬರಿ ಮಸೀದಿಯ ಉತ್ಖನನದಲ್ಲಿ ತಾವು ಭಾಗಿಯಾಗಿದ್ದು ತಿಳಿಸಿ ಅವರ ಪ್ರಕಾರ, ಮಸೀದಿಯ ಕೆಳಗೆ ದೇವಾಲಯದ ಯಾವುದೇ ಪುರಾತತ್ವ ಶಾಸ್ತ್ರದ ಪುರಾವೆಗಳಿಲ್ಲ ಎಂದು ಮುಸ್ಲಿಂ ಸಮುದಾಯವನ್ನು ಮನವೊಲಿಸಿದ ಕಮ್ಯುನಿಸ್ಟ್ ಇತಿಹಾಸಕಾರರ ಪ್ರಭಾವದಿಂದಾಗಿ ವಿವಾದ ಉಲ್ಬಣಗೊಂಡಿದೆ ಎಂದಿದ್ದಾರೆ.



