ಬೆಂಗಳೂರು : ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಎಚ್.ಡಿ.ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಬಿಡುಗಡೆ ಭಾಗ್ಯ ಎದುರು ನೋಡುತ್ತಿದ್ದ ಪ್ರಜ್ವಲ್ ರೇವಣ್ಣನಿಗೆ ಪರಪ್ಪನ ಅಗ್ರಹಾರ ಜೈಲು ಶಿಕ್ಷೆ ಖಾಯಂ ಎಂಬಂತಾಗಿದೆ.
ವಾದ-ಪ್ರತಿವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಸ್.ಮುದಗಲ್ ಮತ್ತು ವೆಂಕಟೇಶ್ ನಾಯಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಪ್ರಜ್ವಲ್ ರೇವಣ್ಣ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು.
ದಾಖಲೆಗಳನ್ನು ಪರಿಗಣಿಸಿ, ಅಪರಾಧದ ಗಂಭೀರತೆ, ಪ್ರಜ್ವಲ್ ಬಿಡುಗಡೆ ಮಾಡಿದರೆ ಅದು ಇತರರ ಮೇಲೆ ಉಂಟು ಮಾಡುವ ಪರಿಣಾಮವನ್ನು ಪರಿಗಣಿಸಿ, ಪ್ರಜ್ವಲ್‌ಗೆ ವಿಧಿಸಿರುವ ಆಜೀವ ಶಿಕ್ಷೆ ಬದಿಗೆ ಸರಿಸಿ ಜಾಮೀನು ಮಂಜೂರು ಮಾಡುವುದು ಸೂಕ್ತವಲ್ಲ ಎಂದು ಹೇಳಿದೆ.
ವಿಚಾರಣಾಧೀನ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆ ನಡೆದಿದ್ದು, ಮತ್ತೆ ಹೈಕೋರ್ಟ್‌ನಲ್ಲಿ ಸಾಕ್ಷಿಯ ವಿಚಾರಣೆ ನಡೆಸಲಾಗದು. ತೀರ್ಪಿನಲ್ಲಿ ಅಲ್ಲೊಂದು ಇಲ್ಲೊಂದು ಇರುವ ಲೋಪಗಳನ್ನು ನೋಡಲಾಗದು ಎಂದಿದೆ.
ಡಿಸೆಂಬರ್ 1ರಂದು ನಡೆದ ಅರ್ಜಿ ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದ್ದರು. ಪ್ರಜ್ವಲ್ 2024 ರ ಏಪ್ರಿಲ್ 24ರಂದು ದೇಶ ತೊರೆಯುವಾಗ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಪ್ರಜ್ವಲ್ ವಿರುದ್ದ ಏಪ್ರಿಲ್ 28ರಂದು ಪ್ರಕರಣ ದಾಖಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.



