ಬೆಂಗಳೂರು: ನೆನ್ನೆ ನಡೆದ ಸಿಎಂ-ಡಿಸಿಎಂ ನಡುವಿನ ಬ್ರೇಕ್ ಫಾಸ್ಟ್ ಮೀಟಿಂಗ್ ಕುರಿತು ಆರ್. ಅಶೋಕ್ ಹೇಳಿಕೆಯ ಕುರಿತು ವಿಪಕ್ಷ ನಾಯಕ ಆರ್ ಅಶೋಕ್ ಕೋಳಿಯನ್ನು ಜೀವಂತ ತಿನ್ನುತ್ತಾರಾ ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಸಿದ್ದರಾಮಯ್ಯ ಅವರಿಗೆ ನಾಟಿ ಕೋಳಿ ಸಾರು ಬ್ರೇಕ್‌ಫಾಸ್ಟ್‌ಗೆ ಮಾಡಿರುವುದಕ್ಕೆ ಆಕ್ಷೇಪ ಮಾಡಿದ್ದ ಆರ್ ಅಶೋಕ್, ಹನುಮ ಜಯಂತಿಯ ದಿನವೇ ನಾಟಿ ಕೋಳಿ ಮರ್ಡರ್ ಆಗಿದೆ ಎಂದಿದ್ದರು ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಸಿಎಂ ಮನೆಗೆ ಡಿಕೆ ಶಿವಕುಮಾರ್ ಅವರು ಹೋಗಿದ್ದು, ಡಿಕೆಶಿ ಮನೆಗೆ ಸಿಎಂ ಸಿದ್ದರಾಮಯ್ಯ ಅವರು ಬಂದಿದ್ದು ಉತ್ತಮ ಬೆಳವಣಿಗೆ. ಎಲ್ಲವೂ ಒಳ್ಳೆಯದಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಿಎಂ ಶಾಶ್ವತವಲ್ಲ ಎಂಬ ವಿಚಾರವಾಗಿ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಅದನ್ನು ಬೇರೆ ಅರ್ಥದಲ್ಲಿನೊಡೋದು ಬೇಡ. ಎರಡು ಬಾರಿ ಸಿಎಂ ಆಗಿದ್ದವರು. ಹಲವು ಯೋಜನೆ ಕೊಟ್ಟವರು, ಅವರು ಕ್ಲಿಯರ್ ಆಗಿ ಹೇಳಿದ್ದಾರೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದಿದ್ದಾರೆ ಎಂದು ಹೇಳಿದರು.
ಈ ವೇಳೆ ಯಾರ್ಯಾರು ವೈಯುಕ್ತಿಕ ಹೇಳಿಕೆ ಕೊಟ್ಟಿದ್ದಾರೆ. ಅದು ಅವರ ಹೇಳಿಕೆ. ನಾವು ಅದರ ಬಗ್ಗೆ ಮಾತನಾಡಲ್ಲ. ನಾಯಕತ್ವದ ಚರ್ಚೆ ಎಲ್ಲಿಯೂ ಆಗ್ತಿಲ್ಲ. ತಿಂಡಿಗೆ ಹೋಗಿ ಬಂದಿದ್ದಾರೆ ಮತ್ತೆ ನಾಯಕತ್ವ ಬದಲಾವಣೆ ಅಂದ್ರೆ ಏನು? ಹೈಕಮಾಂಡ್ ನಿರ್ಧಾರವೇ ನಮಗೆ ವೇದವಾಕ್ಯ ಎಂದರು.
ಸಿಎಂ, ಡಿಸಿಎಂ ಪರವಾಗಿ ಬೆಂಬಲಿಗರ ಘೋಷಣೆ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು, ಅವರ ಅಭಿಮಾನಿಗಳು ಕೂಗಿರಬಹುದು. ಆದರೆ ಎಲ್ಲವನ್ನೂ ದೆಹಲಿಯಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ವೇಣುಗೋಪಾಲ್ ರಾಷ್ಟ್ರೀಯ ನಾಯಕರು. ಅವರ ಮುಂದೆ ಸಿಎಂ, ಡಿಸಿಎಂ ಅಭಿಮಾನಿಗಳು ಬೇಡಿಕೆ ಇಡುವುದು ಸಹಜ. ಅದು ಅವರವರ ಅಭಿಪ್ರಾಯ. ಅವಕಾಶಕ್ಕಾಗಿ ಎಲ್ಲರೂ ಕಾಯುತ್ತಾರೆ. ಈಗ ನಮಗೆ ಕೊಟ್ಟಿದ್ದಾರೆ. ನಾಳೆ ಬೇರೆಯವರಿಗೆ ಕೊಡಬಹುದು ಎಂದು ತಿಳಿಸಿದರು.
ಸಿಎಂ,ಡಿಸಿಎಂ ಹೇಳಿದ ಮೇಲೆ ಇನ್ನೇನಿದೆ? ನಾವು ಏನಾದ್ರೂ ಕೇಳೋಕೆ ಬರುತ್ತಾ? ನಾನು ವಿಪಕ್ಚ ನಾಯಕರ ಮಾತು ಕೇಳಿದೆ, ಅವರು ಭಾವನಾತ್ಮಕ ವಿಚಾರದಲ್ಲೇ ಅಧಿಕಾರಕ್ಕೆ ಬಂದವರು. ಅವರು ವಿಪಕ್ಷದಲ್ಲಿರುವುದು ಯಾಕೆ. ಅವರ ಸ್ಥಾನಕ್ಕೆ ನಾಚಿಕೆ ಆಗಬೇಕು. ನಮ್ಮ ಬಳಿ ಬಂದು ಅವರು ಪ್ರಶ್ನೆ ಕೇಳಲಿ ಎಂದು ಕಿಡಿಕಾರಿದ್ದಾರೆ



