Monday, April 21, 2025
Google search engine

Homeಸ್ಥಳೀಯಸಾಮಾಜಿಕ ಬದಲಾವಣೆಗೆ ಸಾವಿರಾರು ಅಂಬೇಡ್ಕರ್ ಬೇಕು

ಸಾಮಾಜಿಕ ಬದಲಾವಣೆಗೆ ಸಾವಿರಾರು ಅಂಬೇಡ್ಕರ್ ಬೇಕು

ಮೈಸೂರು: ಈ ದೇಶ ಬದಲಾವಣೆ ಆಗಬೇಕಾದರೆ ಮಹಾತ್ಮ ಗಾಂಧಿಯೊಬ್ಬರೆ ಸಾಕು. ಆದರೆ ಈ ದೇಶದ ಸಾಮಾಜಿಕ ವ್ಯವಸ್ಥೆ ಬದಲಾಯಿಸಲು ಸಾವಿರಾರು ಡಾ.ಬಿ.ಆರ್.ಅಂಬೇಡ್ಕರ್ ಬೇಕಾಗುತ್ತಾರೆ ಎಂದು ದೇಶದ ಮೊದಲ ಸಮಾಜಶಾಸ್ತ್ರಜ್ಞೆ ಡಾ.ಸಿ.ಪಾರ್ವತಮ್ಮ ಹೇಳಿದ್ದು ಇಂದಿಗೂ ಪ್ರಸ್ತುತ ಎಂದು ಚಿಂತಕ ಡಾ.ವಿ.ಲಕ್ಷ್ಮೀನಾರಾಯಣ ತಿಳಿಸಿದರು.
ನಗರದ ಗೋಕುಲಂನನಲ್ಲಿ ಶಾಗ್ಲಿ ಶಿವರುದ್ರಮ್ಮ ಟ್ರಸ್ಟ್ ಆಯೋಜಿಸಿದ್ದ ಡಾ.ಸಿ.ಪಾರ್ವತಮ್ಮ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಬೌದ್ಧ ಧರ್ಮದ ವೈಚಾರಿಕತೆ ಮತ್ತು ನೈತಿಕತೆಯ ಆಧಾರದ ಮೇಲೆ ಮತಾಂತರಗೊಳ್ಳುತ್ತಾರೆ. ಆದರೆ, ಮತಾಂತರಗೊಂಡವರ ಭೌತಿಕ ಸಮಸ್ಯೆಗಳಾದ ಭೂಮಿ, ಆಸ್ತಿ ಹಂಚಿಕೆ ಪರಿಹಾರ ಕೊಡಿಸಲು ಆಗಲಿಲ್ಲ. ಈ ದೇಶದಲ್ಲಿ ಇರುವ ಸಂಪನ್ಮೂಲಗಳ ಹತೋಟಿಗಾಗಿ ದಲಿತರು ಹೋರಾಟ ಮಾಡಬೇಕಿದೆ ಎಂದು ಪಾರ್ವತಮ್ಮ ಪ್ರತಿಪಾದಿಸಿದ್ದರು ಎಂದು ಹೇಳಿದರು.
ಈ ದೇಶಕ್ಕೆ ಹೊಸ ಸಿದ್ಧಾಂತ ಬೇಕಿದೆ. ಅದು ಮಾನವನ ಅಸ್ಮಿತೆ, ನ್ಯಾಯ ಮತ್ತು ಸಮಾನತೆಯ ಮೇಲೆ ಆದರಿಸಿರಬೇಕು. ಇದಕ್ಕೆ ಪರಿಹಾರಗಳೆಂದರೆ ಸಾರ್ವತ್ರಿಕ ಶಿಕ್ಷಣ, ಕೈಗಾರಿಕೀಕರಣ, ನಗರೀಕರಣ, ಸಾರ್ವಜನಿಕ ಜೀವನದಲ್ಲಿ ಜಾತಿಯ ನಿರಾಕರಣೆ, ಎಲ್ಲ ಧಾರ್ಮಿಕ ಸಂಸ್ಥೆಗಳ ರಾಷ್ಟ್ರೀಕರಣ, ಧರ್ಮ ನಿರಪೇಕ್ಷೆ ಮತ್ತು ಮಾನವೀಯ ಕೆಲಸಗಳಾಗಬೇಕು ಎಂದು ಪಾರ್ವತಮ್ಮ ಸಲಹೆ ನೀಡಿದ್ದರು. ಅವರ ಸಲಹೆಗಳು ಇಂದಿಗೂ ಪ್ರಸ್ತುತ ಜತೆಗೆ ಅನುಕರಣೀಯ ಎಂದು ವಿವರಿಸಿದರು.
ಸಮಾಜಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಅವರ ಶಿಷ್ಯವೇತನ ಪಡೆದಿದ್ದ ಅವರು, ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ದಕ್ಷಿಣ ಭಾರತದ ಹಳ್ಳಿಗಳಲ್ಲಿ ದಲಿತರ ಸ್ಥಿತಿ ಕುರಿತು ಪಿಎಚ್.ಡಿ ಪದವಿ ಪಡೆದರು. ನಂತರ ಉತ್ತರ ಕರ್ನಾಟಕದಲ್ಲಿ ಭೂಮಾಲೀಕರ ದಬ್ಬಾಳಿಕೆ ಕುರಿತು ಲೇಖನಗಳನ್ನು ಬರೆದರು. ಜೊತೆಗೆ ಬ್ರಾಹ್ಮಣ್ಯದ ವಿರುದ್ಧ, ಸಮಾಜ ಸುಧಾರಣೆಯಲ್ಲಿ ವೀರಶೈವ ಧರ್ಮದ ಪಾತ್ರದ ಕುರಿತು ಅಧ್ಯಯನ ಕೈಗೊಂಡಿದ್ದರು. ೭೦ಕ್ಕೂ ಅಧಿಕ ಲೇಖನಗಳನ್ನು ಪ್ರಕಟಿಸಿದ್ದ ಅವರು, ೧೧ ಪುಸ್ತಕಗಳನ್ನು ರಚಿಸಿದ್ದರು ಎಂದು ಸ್ಮರಿಸಿದರು.
೭೯ ವರ್ಷ ಬದುಕಿದ್ದ ಅವರು, ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಅವರು ರಾಜ್ಯೋತ್ಸವ, ಗಾರ್ಗಿ ಪ್ರಶಸ್ತಿ, ನಾಡೋಜ ಮೊದಲಾದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು ಎಂದರು.
ಶಾಗ್ಲಿ ಶಿವರುದ್ರಮ್ಮ ಟ್ರಸ್ಟಿನ ಪದಾಧಿಕಾರಿಗಳಾದ ಡಾ.ಕಾಳಚನ್ನೇಗೌಡ, ಎಂ.ರುದ್ರಯ್ಯ, ರತಿ ರಾವ್, ಪ್ರೊ.ಸತ್ಯನಾರಾಯಣ, ಪಿಯುಸಿಎಲ್ ಸದಸ್ಯರಾದ ಪ್ರೊ.ಕುಮಾರಸ್ವಾಮಿ, ಪುರುಷೋತ್ತಮ್, ಪ್ರೊ.ಲತಾ ಬಿದ್ದಪ್ಪ, ಶ್ರೀದೇವಿ, ಎಂ.ವನಜಾ, ಡಾ.ಪ್ರಸನ್ನ ಕೆರಗೋಡು ಹಾಜರಿದ್ದರು.

RELATED ARTICLES
- Advertisment -
Google search engine

Most Popular